ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಎಂಬ ಮಹಾಮಾರಿ ವಿಶ್ವ ಆರೋಗ್ಯ ಕ್ಷೇತ್ರವನ್ನೇ ಕಾಡುತ್ತಿರುವ ಸಂಕಷ್ಟದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಜನರಿಗೆ ಆರೋಗ್ಯ ಸೌಲಭ್ಯ ಒದಗಿಸಬೇಕಾದ ಅಗತ್ಯವಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿಮಾನ್ಸ್ ಸಮಾವೇಶ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡಿ ಮಾತನಾಡಿದರು.
ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಕೊರೊನಾವನ್ನು ಸವಾಲಾಗಿ ಸ್ವೀಕರಿಸಿ ರಾತ್ರಿ-ಹಗಲು ಕೆಲಸ ಮಾಡಿದ್ದಾರೆ. ದೇಶದ ಜನರ ಜೀವ ಉಳಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಸಾಂಕ್ರಾಮಿಕ ರೋಗವನ್ನು ಸಮರ್ಪಕವಾಗಿ ನಿಯಂತ್ರಿಸಲು ಆರೋಗ್ಯ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಹೆಣ್ಣುಮಕ್ಕಳ ಸಾಧನೆ ಪ್ರಶಂಸನೀಯ
ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬರುತ್ತಿರುವುದು ಪ್ರಶಂಸನೀಯ ಸಂಗತಿಯಾಗಿದೆ. ಈ ಬಾರಿ ವಿಶ್ವವಿದ್ಯಾಲಯದ 111 ಮಂದಿ ಚಿನ್ನದ ಪದಕ ವಿಜೇತರಲ್ಲಿ 87 ಮಂದಿ ಹೆಣ್ಣುಮಕ್ಕಳು ಇರುವುದು ಇರುವುದನ್ನು ಕೇಳಿ ಬಹಳ ಸಂತೋಷವಾಯಿತು ಅದು ಶೇ.80ರಷ್ಟು ನಿಜಕ್ಕೂ ಉತ್ತಮ ಸಾಧನೆ ಎಂದು ರಾಷ್ಟ್ರಪತಿ ಹಾಡಿಹೊಗಳಿದರು.
ಮುಂದಿನ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ದೇಶವನ್ನು ಮಹಿಳೆಯರು ಮುನ್ನಡೆಸುವರು. ನಿಜಕ್ಕೂ ಇದು ಸಂತೋಷವಾಗುತ್ತದೆ ಎಂದು ಹೇಳಿದರು. ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಇನ್ನುಮುಂದೆ ನಿಜವಾದ ಶಿಕ್ಷಣ ಆರಂಭವಾಗಲಿದೆ. ಅಧ್ಯಯನ ಹಾಗೂ ಸಂಶೋಧನೆಯ ಜತೆಗೆ ಜ್ಞಾನವನ್ನು ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಉನ್ನತಿಕರಿಸಿಕೊಳ್ಳುವ ಮೂಲಕ ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ವಿದ್ಯಾರ್ಥಿಯೂ ಯೋಚಿಸಬೇಕು ಎಂದು ಸಲಹೆ ನೀಡಿದರು.
ಭಾರತವು ವೇದಕಾಲದಿಂದಲೂ ಜ್ಞಾನ ಆಧರಿತವಾಗಿ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿತ್ತು. ಕೊರೊನಾ ನಿಯಂತ್ರಣ ಸಂದರ್ಭದಲ್ಲಿ ಆತ್ಮ ನಿರ್ಭರವಾಗುವ ನಿಟ್ಟಿನಲ್ಲೂ ಲಸಿಕೆ ಸಂಶೋಧನೆಯ ಜತೆಗೆ ವಿದೇಶಕ್ಕೂ ನೀಡುತ್ತಿದ್ದೇವೆ ಎಂದು ಸಂತಸ ಹಂಚಿಕೊಂಡರು.
ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾಕ್ಟರ್ ಅಲಂಗಾರ್ ಸತ್ಯರಂಜನ್ ದಾಸ್ ಹೆಗಡೆ ಅವರಿಗೆ ಘಟಿಕೋತ್ಸವದಲ್ಲಿ ಡಾಕ್ಟರ್ ಆಫ್ ಸೈನ್ಸ್ ಗೌರವ ನೀಡಲಾಯಿತು. 122 ಚಿನ್ನದ ಪದಕ ಹಾಗೂ ನಗದು ಬಹುಮಾನ ಗಳಿಗೆ ಪಾತ್ರರಾದ ಒಟ್ಟು 111 ವಿದ್ಯಾರ್ಥಿಗಳನ್ನು ರಾಷ್ಟ್ರಪತಿಯವರು ಪದವಿ ಪ್ರದಾನ ಮಾಡುವ ಮೂಲಕ ಸನ್ಮಾನಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ವಿಶ್ವವಿದ್ಯಾಲಯದ ಕುಲಪತಿ ಸಚ್ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು.