ಜೈಪುರ: ರಾಜಸ್ಥಾನ ರಾಜಕೀಯದಲ್ಲಿ ಕ್ಷಣಕೊಂದು ಬಿಕ್ಕಟ್ಟು ಸೃಷ್ಟಿಯಾಗುತ್ತಿದ್ದು, ಈ ನಡುವೆ ರಾಜ್ಯಪಾಲರು ಕೂಡಲೇ ಅಧಿವೇಶನ ಕರೆಯಬೇಕು ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ಶಾಸಕರು, ಒತ್ತಾಯಿಸಿ ಶುಕ್ರವಾರ ರಾಜಭವನದಲ್ಲಿಯೇ ಧರಣಿ ಆರಂಭಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಇಂದು ತಮ್ಮ ಬೆಂಬಲಿಗ ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಕಲರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿದ್ದು, ಅಲ್ಲದೆ ಸೋಮವಾರದಿಂದ ರಾಜ್ಯ ವಿಧಾನಸಭೆ ಅಧಿವೇಶನ ಕರೆಯುವಂತೆ ಮನವಿ ಮಾಡಿದ್ದಾರೆ. ಆದರೆ ಅದಕ್ಕೆ ರಾಜ್ಯಪಾಲರು ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ರಾಜ್ಯಪಾಲರ ಭೇಟಿ ಬಳಿಕ ಸಿಎಂ ಹೇಳಿದ್ದಾರೆ.
ಈಗ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿತ ಶಾಸಕರು ರಾಜಭವನದಲ್ಲಿಯೇ ಧರಣಿ ಆರಂಭಿಸಿದ್ದು, ರಾಜ್ಯಪಾಲರು ಕೂಡಲೇ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಘೋಷಣೆ ಕೂಗುತ್ತಿದ್ದಾರೆ.
ಇಂದು ರಾಜಸ್ತಾನ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಕ್ರಮದ ಬಗ್ಗೆ ಹೆಜ್ಜೆಯಿಟ್ಟಿರುವ ಅಶೋಕ್ ಗೆಹ್ಲೋಟ್ ತಮ್ಮ ಬೆಂಬಲಿಗ ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ಶಾಸಕರ ಪರೇಡ್ ನಡೆಸಿದ್ದಾರೆ.
ರಾಜ್ಯಪಾಲರು ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ವಿಧಾನಸಭೆ ಅಧಿವೇಶನ ಕರೆಯುತ್ತಿಲ್ಲ. ಅಧಿವೇಶನ ಕರೆದರೆ ರಾಜ್ಯದಲ್ಲಿನ ಕೊರೋನಾ ಸ್ಥಿತಿಗತಿ, ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚಿಸಬಹುದು. ಕೆಲವು ಬಂಡಾಯ ಕಾಂಗ್ರೆಸ್ ಶಾಸಕರು ಹೊರಬಂದು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧವಿದ್ದಾರೆ. ಆದರೆ ಅವರನ್ನು ಹರ್ಯಾಣದ ಹೊಟೇಲ್ ನಲ್ಲಿ ಕೂಡಿಹಾಕಲಾಗಿದೆ ಎಂದು ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಈ ಮಧ್ಯೆ, ಸಚಿನ್ ಪೈಲಟ್ ಸೇರಿದಂತೆ 19 ಕಾಂಗ್ರೆಸ್ ಬಂಡಾಯ ಶಾಸಕರ ವಿರುದ್ಧ ಸದ್ಯಕ್ಕೆ ಸ್ಪೀಕರ್ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ರಾಜಸ್ತಾನ ಹೈಕೋರ್ಟ್ ಆದೇಶ ನೀಡಿದೆ.