ರಾಯಚೂರು: ಕ್ವಾರಂಟೈನ್‌ನಲ್ಲಿ ಇದ್ದ ಹದಿನಾಲ್ಕು ವರ್ಷ ಬಾಲಕ ಚಿಕಿತ್ಸೆ ಸಿಗದೆ ಹೊಟ್ಟೆನೋವಿನಿಂದ ಬಳಲಿ ಮೃತಪಟ್ಟಿರುವ ಘಟನೆ ಗುರುವಾರ ದೇವದುರ್ಗದ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.
ಜಿಲ್ಲೆಯ ದೇವದುರ್ಗದ ಕ್ವಾರಂಟೈನ್ ಕೇಂದ್ರದಲ್ಲಿ ಗುಜರಾತ್‌ನಿಂದ ಬಂದಿದ್ದ ಬಾಲಕನನ್ನು ಸರ್ಕಾರದ ವತಿಯಿಂದ ಕ್ವಾರಂಟೈನ್ ಮಾಡಲಾಗಿತ್ತು. ಈ ವೇಳೆ ಕಳೆದ ಎರಡು ದಿನದಿಂದ ಬಾಲಕ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಆದರೂ ಸಂಬಂಧಿಸಿದ ಅಧಿಕಾರಿಗಳು ಆತನಿಗೆ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಬಾಲಕ ಅಸುನೀಗಿದ್ದಾನೆ ಎಂದು ಕ್ವಾರಂಟೈನ್ ಆಗಿರುವವರು ಮತ್ತು ಬಾಲಕನ ಪಾಲಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಎರಡು ದಿನದಿಂದಲೂ ಬಾಲಕ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಅಧಿಕಾರಿಗಳು ಆ ಬಾಲಕನ ಬಗ್ಗೆ ಏಕೆ ಕಾಳಜಿ ವಹಿಸಿಲ್ಲ ಎಂಬ ಅನುಮಾನವು ಕಾಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ವಿಚಾರಿಸಿದರೆ ಆ ಬಗ್ಗೆ ತನಿಖೆ ನಡೆಯುತ್ತಿದ್ದು ಏನಾಗಿದೆ ಎಂಬುವುದು ತಿಳಿಯಲಿದೆ ಎಂದಷ್ಟೇ ಹೇಳಿಕೆ ನೀಡಿದ್ದಾರೆ.
ಇನ್ನು 14 ವರ್ಷದ ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ನಮ್ಮ ಮಗನ ಸಾವಿಗೆ ಕಾರಣರಾದ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಕೊಡಿಸಿ ಎಂದು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಪಾಲಕರ ದುಃಖವನ್ನು ನೋಡುತ್ತಿದ್ದ ಜನರ ಕಣ್ಣಾಲೆಗಳು ತೇವವಾಗುತ್ತಿದ್ದವು.