ವಿಜಯಪಥ ಸಮಗ್ರ ಸುದ್ದಿ
ಜೇವರ್ಗಿ: ತಾಲೂಕಿನ ಸೊನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾದ ಬಿಜೆಪಿ ಬೆಂಬಲಿತ ಶಿವಪ್ಪ ಶಿವಲಿಂಗಪ್ಪ ಗುಬ್ಯಾಡ ಬುಧವಾರ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು ಸೊನ್ನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು. ಕಟ್ಟಿಕೊಂಡಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ, ಕುಡಿಯುವ ನೀರು, ಪ್ರತಿಯೊಬ್ಬರಿಗೂ ವಿದ್ಯುತ್ ಮತ್ತು ಮನೆ ಇಲ್ಲದವರಿಗೆ ಸೂರು ಒದಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.
ಈ ಹಿಂದಿನಿಂದಲೂ ನನಗೆ ಗ್ರಾಮಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲವಿತ್ತು. ಹೀಗಾಗಿ ಗ್ರಾಮಸ್ಥರ ಬೆಂಬಲದಿಂದ ಸದಸ್ಯನಾಗಿ ಆಯ್ಕೆಯಾದೆ. ಈಗ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ನನ್ನ ಅಧಿಕಾರವಧಿಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಒಳ್ಳೆ ಕೆಲಸ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಇನ್ನು ಸರ್ಕಾರದಿಂದ ಪಂಚಾಯಿತಿಗೆ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮವನ್ನು ಅಭಿವೃದ್ಧಿ ಮಾಡುವ ಗುರಿ ಇದೆ. ನನ್ನ ಅಧಿಕಾರ ಅವಧಿಯಲ್ಲಿ ಹೊಸ ಬದಲಾವಣೆ ತರಬೇಕು ಎಂಬ ಹಂಬಲವಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಸದಸ್ಯ ಶಿವಾನಂದ ಮಾಕಾ, ವಿಎಸ್ಎಸ್ಎನ್ ಅಧ್ಯಕ್ಷ ವಿಜಯಕುಮಾರ ಬಿರಾದಾರ, ಜೇವರ್ಗಿ ತಾಲೂಕಿನ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಹಳ್ಳೆಪ್ಪಾಚಾರಿ ಜೋಶಿ, ಗ್ರಾಮ ಪಂಚಾಯಿತಿ ಸದಸ್ಯರಾದ ವೀರಭದ್ರಯ್ಯ ಹಿರೇಮಠ, ಬಾಬು ಮಾಂಗ, ಲಕ್ಷ್ಮಿ ಯಲ್ಲಪ್ಪ ಮತ್ತು ಗ್ರಾಮದ ಶರಣು, ಮಹೇಶ್ ಮಹಾಜನಶೆಟ್ಟಿ, ಶಿವಲಿಂಗಪ್ಪ ಮುಧೋಳ ಇತರರು ಇದ್ದರು.