ಲಖನೌ: ತಾವು ಇಷ್ಟಪಟ್ಟವನ್ನು ಆಯ್ಕೆ ಮಾಡಿಕೊಳ್ಳುವ ಮತ್ತು ಆ ವ್ಯಕ್ತಿಯ ಜೊತೆ ಜೀವಿಸುವ ಹಕ್ಕು ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ
ಹಕ್ಕಿನ ಭಾಗವಾಗಿದೆ ಎಂದು ಉಲ್ಲೇಖಿಸಿರುವ ಅಲಹಾಬಾದ್ ಹೈಕೋರ್ಟ್, ಅಂತರ್‌ಧರ್ಮೀಯ ಜೋಡಿಯೊಂದರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಮಾಡಿದೆ.
‘ಲವ್ ಜಿಹಾದ್’ಗೆ ಕಡಿವಾಣ ಹಾಕಲು ಕಠಿಣ ಕಾಯ್ದೆಗಳನ್ನು ಕೆಲ ರಾಜ್ಯ ಸರ್ಕಾರಗಳು ತರಲು ನಿರ್ಧರಿಸಿರುವ ವೇಳೆಯೇ ಹೈಕೋರ್ಟ್ ನೀಡಿರುವ ಈ ತೀರ್ಪು ಸಂವಿಧಾನದ ವಿರುದ್ಧದ ನಡೆಗೆ ನೀಡಿದ ಉತ್ತರ ಎಂದೆ ಬಿಂಬಿತವಾಗಿದೆ. ವೈಯಕ್ತಿಕ ಸಂಬಂಧಗಳ ನಡುವೆ ಮಧ್ಯಪ್ರವೇಶಿಸುವುದು, ಇಬ್ಬರು ವ್ಯಕ್ತಿಗಳ ನಡುವಿನ ಆಯ್ಕೆಯ ಸ್ವಾತಂತ್ರ್ಯದ ಮೇಲೆ ಗಂಭೀರವಾದ ಅತಿಕ್ರಮಣ ಎಂದು ನ್ಯಾಯಮೂರ್ತಿಗಳಾದ ವಿವೇಕ್ ಅಗರವಾಲ್ ಹಾಗೂ ಪಂಕಜ್ ನಖ್ವಿ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.
ಉತ್ತರ ಪ್ರದೇಶದ ಖುಷಿನಗರ್ ಜಿಲ್ಲೆಯ ಪ್ರಿಯಾಂಕಾ ಖಾರ್‌ವಾರ್ ಹಾಗೂ ಸಲಾಮತ್ ಅಲಿ ಅನ್ಸಾರಿ ಕಳೆದ ವರ್ಷ ಮದುವೆಯಾಗಿದ್ದರು. ಪ್ರಿಯಾಂಕಾ ನಂತರದಲ್ಲಿ ಇಸ್ಲಾಂಗೆ ಮತಾಂತರವಾಗಿದ್ದರು. ಮದುವೆಯ ನಂತರದಲ್ಲಿ ಪ್ರಿಯಾಂಕಾ ಅವರ ಪಾಲಕರು ಅನ್ಸಾರಿ ವಿರುದ್ಧ ಅಪಹರಣದ ದೂರು ನೀಡಿದ್ದರು. ಈ ಎಫ್‌ಐಆರ್ ರದ್ದುಗೊಳಿಸಲು ಕೋರಿ ದಂಪತಿ ಅರ್ಜಿ ಸಲ್ಲಿಸಿದ್ದರು.