ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಪ್ರವರ್ಗ-2ಎ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಗೊಳಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಪ್ರತಿಭಟನೆ ನಡೆಸುತ್ತಿದೆ.
ನಗರದ ಮೌರ್ಯ ವೃತ್ತದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಹಿಂದುಳಿದ ವರ್ಗಗಳ ಸುಮಾರು 16 ಅಭಿವೃದ್ಧಿ ನಿಗಮಗಳ ಪೈಕಿ ಬಹುತೇಕ ನಾನೇ ಮಾಡಿದ್ದೇನೆ.
ಬಿಎಸ್‌ವೈ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದವರಿಗೆ ಎರಡು ನಿಗಮ ಮಾಡಿದರು. ಅದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಈ ಎರಡೂ ನಿಗಮಗಳಿಗೆ ತಲಾ 500 ಕೋಟಿ ರೂ. ಕೊಟ್ಟಿದ್ದಾರೆ. 16 ನಿಗಮಗಳಿಗೆ ಕೇವಲ 500 ಕೋಟಿ ರೂ. ಕೊಟ್ಟಿದ್ದಾರೆ ಇದು ಸರಿಯೇ ಎಂದು ಹೇಳಿದರು.
ಹಿಂದುಳಿದ ನಿಗಮಗಳ ಜನಸಂಖ್ಯೆ ಶೇಕಡ 70 ರಷ್ಟು. ಆದರೆ ಕಡಿಮೆ ಅನುದಾನ ನೀಡಿದ್ದು ನ್ಯಾಯವಾ ಎಂದು ಕೇಳಿದರೆ ಯಡಿಯೂರಪ್ಪ ಉತ್ತರ ಕೊಡಲೇ ಇಲ್ಲ. ಯಡಿಯೂರಪ್ಪ ಹಿಂದುಳಿದ ಜಾತಿಗಳ ವಿರೋಧಿ ಎಂದು ದೂರಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿಲ್ಲ, ವಿದ್ಯಾರ್ಥಿಸಿರಿ ಯೋಜನೆಗೆ ಅನುದಾನ ಕೊಟ್ಟಿಲ್ಲ, ಜಾತಿ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡುತ್ತಿಲ್ಲ. ಈ ವರದಿ ಬಿಡುಗಡೆಯಾದರೆ ಯಾವ ಜಾತಿಯವರ ವಸ್ತುಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತದೆ ಎಂದರು.
ಈ ರಾಜಕಾರಣಿಗಳು ಮತ್ತು ರಾಜಕೀಯದಲ್ಲಿ ಸಮಪಾಲು-ಸಮಬಾಳು ಎಂಬುದು ಕೇವಲ ಭಾಷಣಕ್ಕೆ ಸೀಮಿತವಾಗಿದೆ ಎಂದು ಟೀಕಿಸಿದರು.
ಒಕ್ಕೂಟದ ಅಧ್ಯಕ್ಷ ಕೆ.ಎನ್. ರಾಮಚಂದ್ರಪ್ಪ ಮಾತನಾಡಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮುಂದುವರಿದಿರುವ ಸಮುದಾಯಗಳನ್ನು 2ಎಗೆ ಸೇರಿಸಬಾರದು. ಸೇರ್ಪಡೆಗೊಳಿಸಿದ್ದರೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.