ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸೋಂಕಿನಿಂದ ಬಳಲುತ್ತಿರುವ ರಾಜ್ಯದ ಜನರಿಗೆ ಸೂಕ್ತ ಲಸಿಕೆ ನೀಡಿ ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಗಾಂಧಿ ಪ್ರತಿಮೆ ಬಳಿ ಸರ್ಕಾಋದ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.
ಕೊರೊನಾ ಸೋಂಕಿತರ ಪ್ರಾಣ ರಕ್ಷಣೆಯಲ್ಲಿ ವಿಫಲವಾಗಿರುವ, ಬೆಡ್, ಆಕ್ಸಿಜನ್, ವೆಂಟಿಲೇಟರ್ ಒದಗಿಸುವಲ್ಲಿ ನಿರ್ಲಕ್ಷ ವಹಿಸಿರುವ, ಬಡವರಿಗಾಗಿ ವಿಶೇಷ್ ಪ್ಯಾಕೇಜ್ ಘೋಷಿಸದ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಜೊತೆಗೂಡಿ ವಿಕಾಸಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದೆ.
ಕರ್ನಾಟಕ ದೇಶದಲ್ಲಿ ನಂ1 ಸೋಂಕಿತ ರಾಜ್ಯವಾದ ಬೆನ್ನಲ್ಲೇ ಬಿಜೆಪಿ ಸರ್ಕಾರ ಮತ್ತೊಂದು ವಂಚನೆಗೆ ಮುಂದಾಗಿದೆ, ಕೋವಿಡ್ ಪರೀಕ್ಷೆ ಕಡಿತಗೊಳಿಸಿ ಸೋಂಕಿನ ಪ್ರಮಾಣ ಕಡಿಮೆ ತೋರಿಸುವ ಹುನ್ನಾರಕ್ಕೆ ನಡೆಸಿದೆ.
ತನ್ನ ಅವೈಜ್ಞಾನಿಕ ಲಾಕ್‌ಡೌನ್ ಸಮರ್ಥಿಸಿಕೊಳ್ಳಲು ಇಂತಹ ಆತಂಕಕಾರಿಯ ವಾಮಮಾರ್ಗ ಹಿಡಿದಿದೆ. ಅದನ್ನು ಬಿಟ್ಟು ನಾಡಿನ ಜನತೆಗೆ ಸೂಕ್ತ ಚಿಕಿತ್ಸೆ ನೀಡಿ ಅವರ ಜೀವ ಉಳಿಸಬೇಕು ಎಂದು ಆಗ್ರಹಿಸಿದರು.
ಇನ್ನು ಕೊರೊನಾ ಲಸಿಕೆ ಇಲ್ಲ ಎಂದು ಹೇಳುವ ಸರ್ಕಾರಕ್ಕೆ ಜನರು ನರಳುವುದನ್ನೇ ನೋಡುವ ದೃಷ್ಟಿಕೋನದಲ್ಲಿ ಇದ್ದಂತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಸರ್ಕಾರದ ವಿರುದ್ಧ ಘೋಷಣೆಕೂಗಿದ ಪ್ರತಿಭಟನಾಕಾರರು ನಾಡಿನ ಸಮಸ್ತ ಪ್ರಜೆಗಳನ್ನು ಹಸಿವಿನಿಂದಲೂ ಮುಕ್ತಗೊಳಿಸುವ ನಿಟ್ಟಿನಲ್ಲೂ ಸಮರ್ಪಕವಾದ ಕ್ರಮ ಕೈಗೊಳ್ಳಬೇಕು. ಕೊರೊನಾ ಸೋಂಕಿತ ಪ್ರತಿಯೊಬ್ಬರಿಗೂ ಆಕ್ಸಿಜನ್ ಮತ್ತು ಸೂಕ್ತ ಚಿಕಿತ್ಸೆ ಸಿಗಬೇಕು ಎಂದು ಒತ್ತಾಯಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಮಾಜಿ ಸಂಸದ ಉಗ್ರಪ್ಪ, ಬಿ.ಕೆ. ಹರಿಪ್ರಸಾದ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.