ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕನ್ನಡಿಗರ ಭಾಷಾಭಿಮಾನವನ್ನು ಗೂಗಲ್ ಮತ್ತು ಅಮೆಜಾನ್ ಕೆಣಕಿದ್ದವೋ, ಇಲ್ಲವೇ ಪಟ್ಟಭದ್ರರು ಕೆಣಕಿದ್ದರೋ.. ಆದರೆ, ಕನ್ನಡಿಗರು ಖಚಿತವಾಗಿ ಸಿಡಿಯುತ್ತಾರೆ ಎಂಬ ಉತ್ತರ ಕೆಣಕಿದವರಿಗೆ ಸಿಕ್ಕಿದೆ. ಆದರೆ, ಈ ಸಣ್ಣ ವಿಚಾರಗಳೇ ವೈಭವೀಕರಣಗೊಂಡು, ಚರ್ಚೆಯಾಗಬೇಕಾದ ಗಂಭೀರ ವಿಚಾರಗಳು ಮರೆಯಾಗದಿರಲಿ. ಕನ್ನಡ,ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ದೊಡ್ಡದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕನ್ನಡದ ವಿಚಾರದಲ್ಲಿನ ಅಜಾಗರೂಕತೆ, ಅಸೂಕ್ಷ್ಮತೆ, ಭಂಡತನವನ್ನು ನಾವು ಪ್ರಶ್ನೆ ಮಾಡಬೇಕಿತ್ತು, ಮಾಡಿದ್ದೇವೆ. ಆದರೆ, ಯಕಶ್ಚಿತ್ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ನಮ್ಮ ಹೋರಾಟಗಳನ್ನು ಕೇಂದ್ರೀಕರಿಸಿ ಏನು ಉಪಯೋಗ? ನಮ್ಮ ಹೋರಾಟ ಇರಬೇಕಾದ್ದು ಒಕ್ಕೂಟ ವ್ಯವಸ್ಥೆಯಲ್ಲಿನ ನಮ್ಮ ಹಕ್ಕುಗಳಿಗಾಗಿ. ನಮಗೆ ಸಿಗಬೇಕಾದ ನ್ಯಾಯದ ವಿಚಾರಕ್ಕಾಗಿ.
.
ಗೂಗಲ್ ಆಲ್ಗಾರಿದಮ್‌ನ ಸಮಸ್ಯೆಯಿಂದಾಗಿ ಕನ್ನಡಕ್ಕೆ ಅಪಮಾನವಾಗಿರಬಹುದು. ಆದರೆ, ಗೂಗಲ್ ತನ್ನ ತಪ್ಪು ಒಪ್ಪಿಕೊಂಡಿದೆ. ಜಾಗತಿಕವಾಗಿ ಕ್ಷಮೆ ಕೋರಿದೆ. ಆದರೆ, ಸ್ವಾತಂತ್ರ್ಯ ನಂತರದಲ್ಲಿ ರಚನೆಯಾದ ಒಕ್ಕೂಟ ಸರ್ಕಾರಗಳು ಕನ್ನಡಕ್ಕೆ ಎಷ್ಟು ಮಾನ್ಯತೆ ನೀಡಿವೆ? ಕನ್ನಡಕ್ಕೆ ಆದ ಅನ್ಯಾಯ ಸರಿಪಡಿಸಲು ಎಷ್ಟು ಪ್ರಾಮಾಣಿಕವಾಗಿ ಪ್ರಯತ್ನಿಸಿವೆ?
ಕೇಂದ್ರ ಸರ್ಕಾರಗಳೆಲ್ಲವೂ ಅಪಮಾರ್ಗದಲ್ಲಿ ಹಿಂದಿಯನ್ನು ಹೇರಿಕೊಂಡೇ ಬಂದಿವೆ. ಕನ್ನಡವನ್ನು 3ನೇ ದರ್ಜೆ ಭಾಷೆಯಾಗಿ ಕಾಣುತ್ತಾ ಬಂದಿವೆ. ಇತ್ತೀಚಿನ ವರ್ಷಗಳಲ್ಲಂತೂ ಹಿಂದಿ ಹೇರಿಕೆಯ ಪ್ರಯತ್ನ ಅತ್ಯಂತ ಪ್ರಬಲವಾಗಿ ನಡೆಯುತ್ತಿದೆ. ‘ಒಂದು ದೇಶ ಒಂದು ಭಾಷೆ‘ ಪರಿಕಲ್ಪನೆ ಅಡಿಯಲ್ಲಿ ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ಪ್ರಯತ್ನಗಳಾಗುತ್ತಿವೆ ಎಂದು ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ನೌಕರಿ ಸಿಗಬೇಕಿದ್ದರೆ ಹಿಂದಿ ಭಾಷೆ ಬರಬೇಕೆಂಬ ಷರತ್ತುಗಳು, ಹಿಂದಿಯಲ್ಲೇ ಪರೀಕ್ಷೆ ಬರೆಯಬೇಕೆಂಬ ನಿಬಂಧನೆಗಳು, ತ್ರಿಭಾಷಾ ಸೂತ್ರವೆಂಬ ಕುಣಿಕೆಗಳು ಹಿಂದಿ ಹೇರಿಕೆಯ ಸ್ಪಷ್ಟ ಪ್ರಯತ್ನಗಳು. ಸ್ಥಳೀಯ ಭಾಷೆಗಳನ್ನು ಕೊಲ್ಲುವ ಅಜೆಂಡಾಗಳು. ನಮ್ಮಹೋರಾಟಗಳು ಇಂಥ ಮಾರಕ ಅಜೆಂಡಾಗಳ ವಿರುದ್ಧ ಇರಬೇಕು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ.
ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದರೆ ಮಾನ್ಯತೆ ಸಿಗುವುದಿಲ್ಲ, ಗಂಭೀರವಾಗಿಯೂ ಆಲಿಸುವುದಿಲ್ಲ. ಕೇಂದ್ರದ ಪ್ರಕಟಣೆಗಳು ಸ್ಥಳೀಯ ಭಾಷೆಯಲ್ಲಿ ಸಿಗುವುದಿಲ್ಲ. ಕೇಂದ್ರದ ಸೇವೆಗಳು ಕನ್ನಡದಲ್ಲಿಲ್ಲ. ಅಧಿಕಾರಿಗಳು, ಸಿಬ್ಬಂದಿ ಕನ್ನಡದಲ್ಲಿ ಮಾತನಾಡುವುದಿಲ್ಲ. ವೆಬ್‌ಸೈಟ್‌ಗಳಲ್ಲಿ ಕನ್ನಡವಿಲ್ಲ. ಗ್ರಾಹಕ ಸೇವೆ ಕನ್ನಡದಲ್ಲಿ ಸಿಗುವುದಿಲ್ಲ.
ನಮ್ಮ ಜಿಎಸ್‌ಟಿ ಪಾಲು ನಮಗೆ ಸಿಗುವುದಿಲ್ಲ, ನೆರೆ–ಬರ ಪರಿಹಾರವಿಲ್ಲ, ಕನ್ನಡಿಗರು ಉಸಿರುಗಟ್ಟಿ ಸಾಯುತ್ತಿದ್ದರೂ ಆಮ್ಲಜನಕ ನೀಡುವುದಿಲ್ಲ,ಕಾಯಿಲೆಗೆ ಔಷಧ ನೀಡುವುದಿಲ್ಲ. ಕರ್ನಾಟಕದಿಂದ ಬರಬೇಕಾದ್ದನ್ನು ವಸೂಲಿ ಮಾಡದೇ ಬಿಡುವುದಿಲ್ಲ. ಇದೆಲ್ಲವೂ ಕನ್ನಡ, ಕನ್ನಡಿಗರ ಮೇಲಿನ ದರ್ಪವಲ್ಲದೇ ಮತ್ತೇನಲ್ಲ. ನಮ್ಮ ಹೋರಾಟ ಇದರ ವಿರುದ್ಧವೂ ಇರಬೇಕು.
ರಾಜಕೀಯದಲ್ಲಿನ ಹಿಂದಿ ಪಾರಮ್ಯವನ್ನು ಕಣ್ಣಾರೆ ಕಂಡವನು ನಾನು. ಕನ್ನಡಿಗ ಎಚ್.ಡಿ. ದೇವೇಗೌಡರು 11 ತಿಂಗಳು ಪ್ರಧಾನ ಮಂತ್ರಿಯಾಗಿದ್ದರು. ಭಾಷೆಯ ವಿಚಾರದಲ್ಲಿ ಅವರೆಷ್ಟು ನೋವು ಅನುಭವಿಸಬೇಕಾಯಿತು ಎಂಬುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಹಿಂದಿಯೇತರರು ದೇಶದ ಅತ್ಯುನ್ನತ ಸ್ಥಾನ ವಹಿಸಿಕೊಳ್ಳುವುದನ್ನು ಹಿಂದಿ ಲಾಬಿ ಎಂದೂ ಸಹಿಸುವುದಿಲ್ಲ.
ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿಚಾರದಲ್ಲಿ ಮಾಧ್ಯಮಗಳು ಇನ್ನಷ್ಟು ಕ್ರಿಯಾಶೀಲವಾಗಿ ವರ್ತಿಸಬೇಕಾಗಿದೆ. ಹಲವು ಮಾಧ್ಯಮಗಳು ಆ ಕೆಲಸ ಮಾಡುತ್ತಿವೆ. ಜನರಲ್ಲಿನ ಭಾಷಾಭಿಮಾನವನ್ನು ಕಾಲಕಾಲಕ್ಕೆ ಬಡಿದೆಬ್ಬಿಸಬೇಕಾದ ಜವಾಬ್ದಾರಿ ಮಾಧ್ಯಮಗಳದ್ದು. ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮಾಧ್ಯಮದ ಪಾಲ್ಗೊಳ್ಳುವಿಕೆ ಪ್ರಧಾನ.
ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೂ ತಬ್ಬಲಿ ಮಕ್ಕಳಂತೆ ಬಾಳುವುದಿದೆಯಲ್ಲ ಅದು ಅಪಾಯಕಾರಿ. ಕನ್ನಡಿಗರು ತಬ್ಬಲಿಗಳಲ್ಲ. ರಾಜ್ಯ ಕಟ್ಟಿದವರು, ರಾಜ್ಯ ಆಳಿದವರು, ರಾಜ್ಯ ವಿಸ್ತರಿಸಿದವರು. ಅದು ನಮ್ಮ ಐತಿಹಾಸಿಕ ಗುಣ. ಕನ್ನಡಿಗರಾದ ನಮಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ನಮ್ಮ ಐತಿಹಾಸಿಕ, ಚಾರಿತ್ರಿಕ ಗುಣ ಜಾಗೃತವಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದ್ದಾರೆ.
Super hdk