ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೆಪಿಎಸ್ಸಿ 2011ರ ನೇಮಕಾತಿ ಯಲ್ಲಿ ನಡೆದಿರುವ ಹಗರಣದ ತನಿಖೆಗೆ ಸರಕಾರ ನಿನ್ನೆ ನಡೆದ ಮಂತ್ರಿಮಂಡಲ ಸಭೆಯಲ್ಲಿ ಪ್ರಾಸಿಕ್ಯೂಷನ್ ಅನುಮತಿಗೆ ನಿರಾಕರಿಸುವ ಮೂಲಕ ಎಳ್ಳು ನೀರು ಬಿಟ್ಟಿದೆ. ಈ ಮೂಲಕ ಬಿಜೆಪಿಯವರು ತಮ್ಮ ಈ ಹಿಂದಿನ ಅವಧಿಯಲ್ಲಿ ಮಾಡಿರುವ ಭ್ರಷ್ಟಾಚಾರದ ಕೆಲಸ ಹೊರಗೆ ಬರದೆ ಮುಚ್ಚಿ ಹಾಕುವ ತಂತ್ರವನ್ನು ಮಾಡಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ಆರೋಪಿಸಿದರು.
ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಸುದ್ದಿಗೋಷ್ಠಿಯ ಮಾತನಾಡಿ, ಹತ್ತು ವರ್ಷಗಳಿಂದ ರಾಜ್ಯದ ಅತ್ಯಂತ ಪ್ರಮುಖ ನೇಮಕಾತಿ ಹಗರಣದಲ್ಲಿ ತಪ್ಪಿತಸ್ಥರ ವಿರುದ್ಧ ತನಿಖೆ ಕೈಗೊಳ್ಳಲು ರಾಜ್ಯ ಉಚ್ಚ ನ್ಯಾಯಾಲಯ ಸರ್ವೋಚ್ಚ ನ್ಯಾಯಾಲಯಗಳೆರಡೂ ಸಹ ಆದೇಶ ನೀಡಿದ್ದರು ಸರ್ಕಾರದ ಈ ನಡೆ ನ್ಯಾಯಾಲಯಗಳಿಗೆ ಮಸಿ ಬಳಿಯುವಂತೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ಪರಮೋಚ್ಚ ನಾಯಕ ದೇವೇಗೌಡರ ಆಪ್ತ ಶಿಷ್ಯ ಗೋನಾಳ್ ಭೀಮಪ್ಪ ಅಂದಿನ ಅಧ್ಯಕ್ಷರಾಗಿದ್ದರು. ಇವರನ್ನು ರಕ್ಷಿಸುವ ಸಲುವಾಗಿ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನ ಪ್ರಮುಖ ನಾಯಕರು ತನಿಖೆಯನ್ನು ಕೈಬಿಡಬೇಕೆಂಬ ರೀತಿಯ ಚರ್ಚೆಯನ್ನು ನಡೆಸಿದ್ದು ರಾಜ್ಯದ ದುರಂತ ಎಂದರು.
ಭ್ರಷ್ಟರಿಗೆ ಶಿಕ್ಷೆ ಆಗಲೇ ಬೇಕೆಂಬ ಉದ್ದೇಶದಿಂದ ರಾಜ್ಯಾದ್ಯಂತ ನಡೆದ ಅನೇಕ ಹೋರಾಟಗಳ ಮೂಲಕ ಸಂಚಲನವನ್ನೇ ಸೃಷ್ಟಿ ಮಾಡಿದ್ದ ಈ ಬೃಹತ್ ಕರ್ಮಕಾಂಡವನ್ನು ಈ ರೀತಿಯ ಕೆಟ್ಟ ನಿರ್ಣಯಗಳ ಮೂಲಕ ಮುಚ್ಚಿ ಹಾಕುವ ಸರ್ಕಾರದ ನಡೆ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಜನವಿರೋಧಿ ಎಂದು ಮುಕುಂದ ಗೌಡ ತಿಳಿಸಿದರು.
ದೇಶದ ಈ ರೀತಿಯ ವಿವಾದಾತ್ಮಕ ನೇಮಕಾತಿಗಳ ಬಗ್ಗೆ ಅಂತಿಮ ನಿರ್ಣಯವನ್ನು ತೆಗೆದುಕೊಳ್ಳುವ ಏಕೈಕ ಅಧಿಕಾರ ರಾಷ್ಟ್ರಪತಿಗಳಿಗೆ ಮಾತ್ರ ಇರುತ್ತದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ರಾಷ್ಟ್ರಪತಿಗಳ ಪರಮಾಧಿಕಾರವನ್ನು ಸಹ ಕಿತ್ತುಕೊಂಡು ಮಂತ್ರಿ ಮಂಡಲ ಸಭೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕಿಡಿ ಕಾರಿದರು.
ಈ ಬಗ್ಗೆ ಆಮ್ ಆದ್ಮಿ ಪಕ್ಷ ರಾಷ್ಟ್ರಪತಿಗಳಿಗೆ ದೂರನ್ನು ನೀಡುವ ಮೂಲಕ ಈ ಕೂಡಲೇ ಮಧ್ಯ ಪ್ರವೇಶಿಸಿ ರಾಜ್ಯದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಮನವಿ ಮಾಡಿಕೊಳ್ಳುತ್ತದೆ ಎಂದು ತಿಳಿಸಿದರು.