ವಿಜಯಪಥ ಸಮಗ್ರ ಸುದ್ದಿ
ಹಾಸನ್: ದನ ಕಾಯುವವನೂ ಐಎಎಸ್ ಪಾಸ್ ಮಾಡಿದ್ದಾನೆ ಎಂದರೆ ಖುಷಿ ಪಡುವ ವಿಷಯ. ಆದರೆ, ಅಧಿಕಾರ ಸಿಕ್ಕ ನಂತರ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹು ಮುಖ್ಯ ಎಂದು ಮಾಜಿ ಸಚಿವ ಎ. ಮಂಜು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಐಎಎಸ್ ಅಧಿಕಾರಿಯೂ ಮನುಷ್ಯರೆ ಆಗಿರುತ್ತಾರೆ. ಐಎಎಸ್ ಅಧಿಕಾರಿಗಳು ಮಾಡುವ ತಪ್ಪನ್ನು ತಿದ್ದಲೇ ಜನ ಪ್ರತಿನಿಧಿಗಳಿದ್ದಾರೆ. ಆದರೆ, ರೋಹಿಣಿ ಸಿಂಧೂರಿ ಅವರು ತಮ್ಮದೇ ನಿರ್ಧಾರ ಸರಿ ಎನ್ನುವ ಮನೋಭಾವನೆ ಹೊಂದಿದ್ದಾರೆ. ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧರಿಲ್ಲ ಎಂದು ಆರೋಪಿಸಿದರು.
ಮೈಸೂರು ನಗರಕ್ಕೆ ಏನು ಬೇಕು ಎಂಬುದನ್ನು ಆ ಕಾಲದಲ್ಲೇ ಮೈಸೂರು ಅರಸರು ಆಲೋಚಿಸಿ ನಗರವನ್ನು ಕಟ್ಟಿದ್ದಾರೆ. ಪಾರಂಪರಿಕ ಕಟ್ಟಡಗಳ ರಕ್ಷಣಾ ಸಮಿತಿಗೆ ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗಿರುತ್ತಾರೆ. ಪಾರಂಪರಿಕ ಕಟ್ಟಡಗಳನ್ನು ರಕ್ಷಿಸಬೇಕಾದ ರೋಹಿಣಿ ಸಿಂಧೂರಿ ಅವರೇ ಈ ರೀತಿ ಪಾರಂಪರಿಕ ಕಟ್ಟಡಗಳನ್ನು ಹಾಳುಮಾಡುತ್ತಿರುವುದು ಸರಿಯಲ್ಲ.
ಅವರು ಅಧಿಕಾರವನ್ನು ಮಿಸ್ ಯೂಸ್ ಮಾಡಿಕೊಳ್ಳುತ್ತಿಲ್ಲ. ಬದಲಾಗಿ ಎನ್‌ಕ್ಯಾಶ್ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳು ಆನ್‌ಲೈನ್ ಶಿಕ್ಷಣಕ್ಕೆ ಒಗ್ಗಬೇಕು ಎನ್ನುವ ಡಿಸಿ ಅವರು ತಮ್ಮ ಮಕ್ಕಳಿಗಾಗಿ ಶಿಕ್ಷಕರನ್ನೇ ಮನೆಗೆ ಕರೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಲು ಸಭೆಯಲ್ಲಿ ಚರ್ಚಿಸಿದ್ದಾರೆಯೇ? ಎಂದೂ ಪ್ರಶ್ನಿಸಿದರು. ಆಂಧ್ರ ಸಿಎಂ ಜಗನ್ ಅವರು ಸಿಂಧೂರಿ ಅವರ ಪರ ಲಾಬಿ ಮಾಡುತ್ತಿದ್ದಾರೆ ಎಂಬುನ್ನು ನಾವು ಒಪ್ಪುವುದಿಲ್ಲ. ಯಾರೇ ಲಾಬಿ ಮಾಡಿದರೂ ಇಲ್ಲಿ ಕೇಳುವವರಿಲ್ಲ. ಅಧಿಕಾರಿ ಯಾವುದೇ ರಾಜ್ಯದವರಾಗಲಿ ಕರ್ನಾಟಕಕ್ಕೆ ಪೋಸ್ಟ್ ಆದ ನಂತರ ರಾಜ್ಯದ ಶ್ರೇಯೋಭಿವೃದ್ಧಿಗಾಗಿ ದುಡಿಯಬೇಕು ಎಂದರು.