ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯವೂ ಸೇರಿದಂತೆ ದೇಶಾದ್ಯಂತ ಲೀಟರ್ ಪೆಟ್ರೋಲ್ ಬೆಲೆ 100 ರೂ.ಗಡಿ ದಾಟಿದೆ. ಈ ನಡೆಯನ್ನು ವಿರೋಧಿಸಿ, ಕೆಪಿಸಿಸಿ ‘100 ನಾಟೌಟ್ ಕ್ಯಾಂಪೇನ್’ ಹಮ್ಮಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂನ್ 11ರಿಂದ 5 ದಿನಗಳ ಕಾಲ ಕ್ಯಾಂಪೇನ್ ನಡೆಯಲಿದೆ. ರಾಜ್ಯದ 5 ಸಾವಿರ ಪೆಟ್ರೋಲ್ ಬಂಕ್‌ಗಳಲ್ಲಿ ಧರಣಿ ನಡೆಯುತ್ತದೆ. ಜೂನ್ 11ರಂದು ಜಿಲ್ಲಾ ಕೇಂದ್ರಗಳಲ್ಲಿ, ಜೂನ್ 12 ತಾಲೂಕು ಕೇಂದ್ರಗಳಲ್ಲಿ, ಜೂನ್ 13 ಜಿಲ್ಲಾ ಪಂಚಾಯಿತಿ, ಹೋಬಳಿ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ.
ಜೂನ್ 14 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ. ಜೂ. 15 ಪ್ರಮುಖ ಪೆಟ್ರೋಲ್ ಬಂಕ್‌ಗಳಲ್ಲಿ ಧರಣಿ ನಡೆಯುತ್ತೆ ಎಂದು ಶಿವಕುಮಾರ್ ಇಂಧನ ಬೆಲೆ ಏರಿಕೆ ವಿರುದ್ಧ ಸಮರ ಸಾರಿದ್ದಾರೆ.
ಎಲ್ಲ ಪ್ರತಿಭಟನೆಗಳಿಗೆ ನಾಯಕತ್ವ ಇರುತ್ತದೆ. ಎಲ್ಲ ಜವಾಬ್ದಾರಿಯನ್ನು ಆಯಾ ನಾಯಕರಿಗೆ ವಹಿಸುತ್ತೇವೆ. ಉಸ್ತುವಾರಿಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡುತ್ತೇವೆ. ಈ ಉಸ್ತುವಾರಿಗಳು ಪ್ರತಿಭಟನೆ ನಿರ್ವಹಣೆ ಮಾಡಬೇಕು. ಒಂದು ನಿಮಿಷದ ವಿಡಿಯೋ ಮಾಡಿ ಐಟಿ ಸೆಲ್‌ಗೆ ರವಾನಿಸಬೇಕು. ನಮ್ಮ ಕೆಪಿಸಿಸಿ ಐಟಿ ಸೆಲ್‌ನಿಂದ, ಎಐಸಿಸಿಗೂ ಕಳಿಸುತ್ತೇನೆ. ನಾನು ಸೇರಿದಂತೆ ಪ್ರತಿಯೊಬ್ಬರೂ ಪ್ರತಿಭಟನೆಗೆ ಹೋಗಬೇಕು. ಶಾಸಕರು, ಮಾಜಿ ಶಾಸಕರು ಕೂಡ ಪ್ರತಿಭಟನೆಗೆ ಹೋಗಬೇಕು. ಕೋವಿಡ್ ನಿಯಮಾನುಸಾರ ಪ್ರತಿಭಟನೆ ಮಾಡಬೇಕು ಎಂದು ಶಿವಕುಮಾರ್ ಪ್ರತಿಭಟನಾ ವಿಧಾನ ತಿಳಿಸಿದ್ದಾರೆ.
ಪ್ರತಿಭಟನೆಗೆ ಎಐಸಿಸಿ ಕೂಡ ಮಾರ್ಗದರ್ಶನ ನೀಡುತ್ತದೆ. ದೇಶದಲ್ಲಿ ಪೆಟ್ರೋಲ್ ಪಿಕ್ ಪಾಕೆಟ್ ನಡೆಯುತ್ತಿದೆ. ಹೀಗಾಗಿ 100 ನಾಟೌಟ್ ಕ್ಯಾಂಪೇನ್ ಮಾಡುತ್ತಿದ್ದೇವೆ. ಜನವರಿಯಲ್ಲಿ 16 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಫೆಬ್ರವರಿಯಲ್ಲಿ 16 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಜೂನ್‌ನಲ್ಲಿ 16 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಮಾರ್ಚ್, ಏಪ್ರಿಲ್, ಮೇನಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಿಲ್ಲ. ಏಕೆಂದರೆ, ಆಗ ಚುನಾವಣೆ ಇರುವ ಕಾರಣ ಪೆಟ್ರೋಲ್ ಬೆಲೆ ಏರಿಕೆ ಮಾಡಲಿಲ್ಲ ಎಂದು ಕಿಡಿಕಾರಿದರು.
ಕೇಂದ್ರ 21 ಲಕ್ಷ ಕೋಟಿ ರೂ. ಆದಾಯ ಮಾಡಿಕೊಂಡಿದೆ. ನಮ್ಮ ನೆರೆಯ ದೇಶಗಳಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗಿಲ್ಲ. ನಮ್ಮ ದೇಶದಲ್ಲಿ ಜಿಡಿಪಿ ದರವೂ ಕುಸಿದಿದೆ. ಬಲಿಷ್ಠ, ಅಭಿವೃದ್ಧಿ ಶೀಲ ಭಾರತದಲ್ಲಿ ಜಿಡಿಪಿ ದರ ಕುಸಿದಿದೆ. ಜನರ ಭಾವನೆ ಅರಿತುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇಂತಹ ಪರಿಸ್ಥಿತಿಗೆ ಬಂದಿದ್ದೇವೆ. ಪೆಟ್ರೋಲ್ ದರ ಏರಿಕೆ ಮೂಲಕ ಜೇಬಿಗೆ ಕತ್ತರಿ ಹಾಕ್ತಿದ್ದಾರೆ. ಪೆಟ್ರೋಲ್ ಬೆಲೆ ಕಡಿಮೆ ಮಾಡಬೇಕೆಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.