ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿರುವ ಪ್ಯಾಕೇಜ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿದೆ ಜೊತೆಗೆ ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಯಡಿಯೂರಪ್ಪ ಅವರು ಪ್ಯಾಕೇಜ್ ಘೋಷಿಸುವ ಮುನ್ನ ನೆರೆ ರಾಜ್ಯಗಳನ್ನು ನೋಡಿಯಾದರೂ ಪಾಠ ಕಲಿಯಬೇಕಿತ್ತು. ಜನರ ಮೂಗಿಗೆ ತುಪ್ಪ ಸವರುವ ಪ್ಯಾಕೇಜ್ ಘೋಷಿಸುವ ಮೂಲಕ ಇತರ ರಾಜ್ಯಗಳ ಮುಂದೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಬಡ ಕುಟುಂಬಗಳಿಗೆ ತಲಾ 10 ಕೆ.ಜಿ. ಅಕ್ಕಿ ಮತ್ತು ದುಡಿಯುವ ವರ್ಗದವರಿಗೆ ತಲಾ 10 ಸಾವಿರ ರೂ. ಪರಿಹಾರ ನೀಡುವ ಪ್ಯಾಕೇಜ್ ಘೋಷಣೆ ಮಾಡಿ, ಸಂಪೂರ್ಣ ಲಾಕ್ಡೌನ್ ಜಾರಿಗೆ ತಂದಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗಿ ಸೋಂಕು ನಿಯಂತ್ರಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಅವರು 1250 ಕೋಟಿ ರೂ. ಪ್ಯಾಕೇಜ್ ಎಂದು ಹೇಳಿದ್ದಾರೆ. ಆದರೆ, ಅವರೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ಒಟ್ಟು ಪ್ಯಾಕೇಜ್ ಮೊತ್ತ ರೂ.1111.82 ಕೋಟಿ ಇದೆ. ಉಳಿದ ಹಣಕ್ಕೆ ಲೆಕ್ಕ ಎಲ್ಲಿ? ಈ ಪ್ಯಾಕೇಜ್ ನಲ್ಲಿ ಕಟ್ಟಡ ಕಾರ್ಮಿಕರಿಗಾಗಿ 494 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಈ ಹಣ ಕಾರ್ಮಿಕರ ಕಲ್ಯಾಣ ನಿಧಿಯಿಂದ ನೀಡುವಂಥದ್ದು. ಇದು ಕಾರ್ಮಿಕರು ತಮ್ಮ ಕೂಲಿ ಹಣದಲ್ಲಿ ನೀಡಿರುವ ವಂತಿಗೆ. ಹೀಗಾಗಿ ಕಾರ್ಮಿಕರಿಗೆ ನೀಡಿರುವ ಪರಿಹಾರವನ್ನು ಪ್ಯಾಕೇಜ್ನಲ್ಲಿ ಸೇರಿಸುವುದು ತಪ್ಪು ಎಂದು ಹೇಳಿದ್ದಾರೆ.
ಸಹಕಾರ ಇಲಾಖೆಯಿಂದ ಪಿಎಲ್ಡಿ ಬ್ಯಾಂಕ್ ಸೇರಿದಂತೆ ಇನ್ನಿತರೆ ಸಹಕಾರ ಬ್ಯಾಂಕ್ಗಳು ನೀಡಿರುವ ಸಾಲ ವಸೂಲಾತಿ ಗಡುವನ್ನು ಮೂರು ತಿಂಗಳು ಮುಂದೂಡಲಾಗಿದೆ. ಇದನ್ನು ಸರ್ಕಾರ ಪರಿಹಾರ ಎಂಬಂತೆ ಬಿಂಬಿಸಿರುವುದು ಎಷ್ಟು ಸರಿ? ಕಟ್ಟಡ ಕಾರ್ಮಿಕರ ಪರಿಹಾರ ಮತ್ತು ಸಾಲ ವಸೂಲಾತಿ ಮುಂದಕ್ಕೆ ಹಾಕಿರುವುದನ್ನು ಬಿಟ್ಟರೆ ಉಳಿಯವುದು 483.44 ಕೋಟಿ ರೂ. ಮಾತ್ರ. ಇದು ಸಂಕಷ್ಟದಲ್ಲಿರುವ ಇಡೀ ರಾಜ್ಯದ ಜನರಿಗೆ ಯಾವ ರೀತಿಯಲ್ಲಿ ಉಪಯುಕ್ತ ಪ್ಯಾಕೇಜ್ ಆಗಲಿದೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಬಿಎಸ್ವೈ ಅವರು ರೂ. 2100 ಕೋಟಿ ಪ್ಯಾಕೇಜ್ ಘೋಷಿಸಿದ್ದರು. ಅದರಲ್ಲಿ 850 ಕೋಟಿ ರೂ. ಗಳಷ್ಟು ಕಟ್ಟಡ ಕಾರ್ಮಿಕರ ನಿಧಿಯಿಂದಲೇ ಹಣವನ್ನು ಖರ್ಚು ಮಾಡಿ, ಸರ್ಕಾರ ಸ್ವಂತ ಹಣದಿಂದ ಖರ್ಚು ಮಾಡಿದೆ ಎಂದು ಸುಳ್ಳು ಹೇಳಿದ್ದರು ಎಂದರು.
ಕಳೆದ ಬಾರಿಯ 2100 ಕೋಟಿ ರೂ.ಗಳ ಪ್ಯಾಕೇಜ್ನಲ್ಲಿ ಬಹುಪಾಲು ಹಣವನ್ನು ನೊಂದ ಜನರಿಗೆ ನೀಡಲೇ ಇಲ್ಲ. ಆಟೋ, ಕ್ಯಾಬ್, ಚಾಲಕರುಗಳಿಗೆ ಸಂಬಂಧಿಸಿದಂತೆ 7.75 ಲಕ್ಷ ಜನರಿಗೆ ತಲಾ 5 ಸಾವಿರ ಪರಿಹಾರ ಕೊಡುವುದಾಗಿ ಘೋಷಿಸಿ, ನೀಡಿದ್ದು, ಕೇವಲ 2.10 ಲಕ್ಷ ಜನರಿಗೆ ಮಾತ್ರ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಸವಿತಾ ಸಮಾಜದ ಶೇ. 50 ಜನರಿಗೂ ಪರಿಹಾರ ಸಿಗಲಿಲ್ಲ. ಅದೇ ರೀತಿ ರೈತರಿಗೆ, ಹೂ ಬೆಳೆಗಾರರಿಗೆ, ಹಣ್ಣು ಬೆಳಗಾರರಿಗೆ ಘೋಷಿಸಿದ್ದ ಪರಿಹಾರದ ಹಣ ಶೇ. 50 ರಷ್ಟು ಜನರನ್ನು ತಲುಪಿಲ್ಲ. ಈ ಬಾರಿಯಾದರೂ ರಾಜ್ಯ ಸರ್ಕಾರ ಇವರಿಗೆ ಸೂಕ್ತ ಪರಿಹಾರ ನೀಡಬೇಕಿತ್ತು ಎಂದಿದ್ದಾರೆ.
ತಮಿಳುನಾಡಿನಲ್ಲಿ 2 ಕೋಟಿಗೂ ಅಧಿಕ ಕುಟುಂಬಗಳಿಗೆ ತಲಾ 4 ಸಾವಿರ ರೂ.ಗಳ ಪ್ರಕಾರ ಸುಮಾರು 8,368 ಕೋಟಿ ರೂ. ಪರಿಹಾರದ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ.
ಬಡಜನರಿಗೆ ನೆರವಾಗುವ ಇಂಥಾ ಪ್ಯಾಕೇಜ್ ನಮ್ಮ ರಾಜ್ಯದಲ್ಲೂ ಅವಶ್ಯವಾಗಿ ಬೇಕಿತ್ತು ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಅವರು ಬಜೆಟ್ ಮೇಲಿನ ಉತ್ತರದ ವೇಳೆ ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಕೇರಳ ರಾಜ್ಯಗಳಿಗಿಂತ ನಮ್ಮ ಆರ್ಥಿಕತೆ ಉತ್ತಮವಾಗಿದೆ ಎಂದು ಹೇಳಿದ್ದರು. ಆದರೆ ಈಗ ರಾಜ್ಯದ ಆರ್ಥಿಕ ಸ್ಥಿತಿ ಸರಿ ಇಲ್ಲ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದಿದ್ದರೂ ಆಂಧ್ರ ಪ್ರದೇಶ, ದೆಹಲಿ, ಕೇರಳ ಮುಂತಾದ ರಾಜ್ಯಗಳು ಜನಪರವಾದ ಪ್ಯಾಕೇಜ್ಗಳನ್ನು ಘೋಷಿಸಿವೆ. ಆ ರಾಜ್ಯಗಳ ಮುಂದೆ ಬಿಎಸ್ವೈ ಅವರು ಘೋಷಣೆ ಮಾಡಿರುವ ಪ್ಯಾಕೇಜ್ ಏನೇನೂ ಅಲ್ಲ. ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಹೇಳಿದ್ದಾರೆ.
ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಮಡಿವಾಳರು, ಛಾಯಾಗ್ರಾಹಕರು, ಟೈಲರಿಂಗ್ ವೃತ್ತಿಯವರು, ಸವಿತಾ ಸಮಾಜದವರಿಗೆ ಪರಿಹಾರ ನೀಡಬೇಕು ಮತ್ತು ಸೋಂಕು ನಿಯಂತ್ರಣಕ್ಕೆ ಬರುವವರೆಗೆ ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿಯಾಗಬೇಕು ಎಂದು ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.