ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಸೇರುವವರ ಪಟ್ಟಿ ಅಂತಿಮವಾಗಿದೆ. ಒಟ್ಟು 29 ಶಾಸಕರು ನೂತನ ಸಚಿವರಾಗಿ ಅಪರಾಹ್ನ 2.15ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ ಬಗ್ಗೆ ಮಾಹಿತಿ ನೀಡಿದರು. ಸಚಿವ ಸಂಪುಟದಲ್ಲಿ 8 ಲಿಂಗಾಯಿತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, ತಲಾ ಒಂದು ಎಸ್‌ಟಿ, ರೆಡ್ಡಿ ಹಾಗೂ ಮಹಿಳೆಗೆ ಸ್ಥಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಾರಿ ಯಾರಿಗೂ ಡಿಸಿಎಂ ಹುದ್ದೆಯನ್ನು ನೀಡಿಲ್ಲ ಹಾಗೂ ಬಿವೈ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡಿಲ್ಲ. ಅನುಭವ ಹಾಗೂ ಹೊಸ ಮುಖಗಳು ಸಂಪುಟದಲ್ಲಿ ಇರಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೇಲೆ ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕ ಪ್ರವಾಸ ಹೋಗಿ ಪ್ರವಾಹ ಪೀಡಿತರಿಗೆ ಸ್ಥಳದಲ್ಲಿಯೇ ಪರಿಹಾರ ಪ್ರಕಟಿಸಿದ್ದೇನೆ ಎಂದರು.
ಇವತ್ತು ಬೆಳಿಗ್ಗೆ ನೂತನ ಸಚಿವರ ಪಟ್ಟಿ ಅಂತಿಮವಾಗಿದ್ದು, ಇಂದು 29 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, ಉಪ ಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಹೈಕಮಾಂಡ್ ತೀರ್ಮಾನಿಸಿದೆ. ರಾಜ್ಯದ ಏಳಿಗೆ, ಪ್ರದೇಶವಾರು, ಜಾತೀಯವಾರು ಸಮಾನತೆ ನೋಡಿಕೊಂಡು ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ ಎಂದರು.
ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಸ್ಥಾನವಿಲ್ಲ. ಅಲ್ಲದೆ ಹಿಂದಿನ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ಅವರನ್ನು ಕೂಡ ಕೈಬಿಡಲಾಗಿದೆ. ಇನ್ನು ಅರವಿಂದ ಲಿಂಬಾವಳಿಯವರನ್ನು ಬಿಟ್ಟು ಆರ್. ಅಶೋಕ್ ಗೆ ಸ್ಥಾನ ನೀಡಲಾಗಿದೆ. ಹೊಸದಾಗಿ ವಿ.ಮುನಿರತ್ನ ಅವರು ಎಂಟ್ರಿಯಾಗಿದ್ದಾರೆ.
ಇನ್ನು, ಕೆಲವು ಹಿರಿಯರನ್ನು ಪಕ್ಷ ಸಂಘಟನೆಗೆ ನಿಯೋಜಿಸಬೇಕೆಂದು ಮಂತ್ರಿ ಸ್ಥಾನ ನೀಡಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಧ್ಯಾಹ್ನ 2.15ಕ್ಕೆ ನೂತನ ಸಚಿವರು ಪದಗ್ರಹಣ ಮಾಡಲಿದ್ದು, ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.