ಚಾಮರಾಜನಗರ: ಒಬ್ಬ ಮನುಷ್ಯನಿಗೆ ಒಂದು ತಿಂಗಳಿಗೆ 5 ಕೆಜಿ ಅಕ್ಕಿ ಸಾಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬಂಡೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು. ಆದರೆ ರಾಜಕೀಯ ಕಾರಣದಿಂದ ಸಿದ್ದರಾಮಯ್ಯ 10 ಕೆಜಿ ಅಕ್ಕಿ ಕೊಡುತ್ತೇನೆ ಎನ್ನುತ್ತಿದ್ದಾರೆ ಅಷ್ಟೇ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ನಾವು ಆಹಾರ ಭದ್ರತೆಯಡಿ 4.1 ಕೋಟಿ ಫಲಾನುಭವಿಗಳಿಗೆ ವಿತರಿಸುತ್ತಿದ್ದೇವೆ. ಅದನ್ನು ಜನರು ಅರ್ಥ ಮಾಡಲಿಕೊಳ್ಳಬೇಕು ಎಂದರು.
ಪಡಿತರದಾರರ ಇ ಕೆವೈಸಿ ಶೇ.70ರಷ್ಟು ಮುಗಿದಿದ್ದು, ಅನರ್ಹ ಪಡಿತರದಾರರನ್ನು ಕೈ ಬಿಡುವ ಉದ್ದೇಶದಿಂದ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
ಇನ್ನು ಇ ಕೆವೈಸಿ ಪ್ರಕ್ರಿಯೆ ಪೂರ್ಣವಾದ ಬಳಿಕ ಎಷ್ಟು ಪಡಿತರ ಉಳಿತಾಯ ಆಗಲಿದೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.