ಬೆಂಗಳೂರು: ಜಾಗತಿಕ ನಕ್ಷೆಯಲ್ಲಿ ಗುರುತರ ಸ್ಥಾನ ಗಳಿಸಿಕೊಂಡಿರುವ ಬೆಂಗಳೂರು ಮಹಾನಗರವನ್ನು ವಿಶ್ವ ದರ್ಜೆಗೇರಿಸುವ ಸಂಕಲ್ಪವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಉದ್ಘಾಟನೆ, ಕೆಂಪೇಗೌಡರ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಚಾಲನೆ, ಕೆಂಪೇಗೌಡರ ಭಾವಚಿತ್ರವುಳ್ಳ ಅಂಚೆಚೀಟಿ ಮತ್ತು ಲಕೋಟೆ ಬಿಡುಗಡೆ ಮಾಡಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಹತ್ತಾರು ಸಾವಿರ ಕೋಟಿ ರೂ. ಅನುಧಾನ ನೀಡಿ ಬೆಂಗಳೂರು ಉಪನಗರ ರೈಲು ಯೋಜನೆ ವಿಸ್ತರಣೆ ಸೇರಿದಂತೆ ಮುಂತಾದ ಯೋಜನೆಗಳನ್ನು ಮಂಜೂರು ಮಾಡಿ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಬಲ ತುಂಬಿದ್ದಾರೆ ಎಂದು ತಿಳಿಸಿದರು.
ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿಯ ಫಲವಾಗಿ ಬೆಂಗಳೂರು ಅಗಾಧವಾಗಿ ಬೆಳವಣಿಗೆ ಸಾಧಿಸಿದೆ. ಅಂತಹ ಮಹಾನ್ ನಾಯಕನ ಆಶಯದಂತೆ ಬೆಂಗಳೂರು ಮಿಷನ್ 2022ರಡಿ ಜನಜೀವನದ ಅಮೂಲಾಗ್ರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಸ್ವೈ ವಿವರಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠಾಧಿಪತಿ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೆಂಪೇಗೌಡರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಸಲಹೆ ನೀಡಿದರು.
ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ಎಲ್‌ಕೆಯಿಂದ ಸ್ವಾತಕೊತ್ತರ ಪದವಿ ವ್ಯಾಸಂಗದ ವರೆಗೂ ಕೆಂಪೇಗೌಡರ ಕುರಿತು ಪಠ್ಯ ಅಳವಡಿಸಬೇಕು ಮತ್ತು ಮೇಟ್ರೋಗೆ ಕೆಂಪೇಗೌಡರ ಹೆಸರು ನಾಮಕರಣ ಮಾಡಬೇಕೆಂದು ಬೇಡಿಕೆ ಮಂಡಿಸಿದರು.
ಸಿದ್ದಗಂಗಾ ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಬೆಂಗಳೂರು ಬೆಳವಣಿಗೆಗೆ ಕೆಂಪೇಗೌಡರು ಭದ್ರಬುನಾದಿ ಹಾಕಿದರು. ಅವರ ದೂರದೃಷ್ಟಿಯ ಕ್ರಮಗಳು ಮಾನವ ಕಲ್ಯಾಣ ಗುಣಗಳನ್ನು ಹೊಂದಿದ್ದು ಅವುಗಳನ್ನು ನಾವು ಪೋಷಿಸಿಕೊಂಡು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದು ಹೇಳಿದರು.