ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ಸಮಯದಲ್ಲಿ ಮಾಡಿರುವ ನೌಕರರ ವಜಾ, ವರ್ಗಾವಣೆ, ಅಮಾನತು ಮತ್ತು ಪೊಲೀಸ್ ಪ್ರಕರಣಗಳನ್ನು ಅತೀ ಶೀಘ್ರದಲ್ಲೇ ಹಿಂಪಡೆಯಲಾಗುವುದು ಎಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇಂದು (ಅ.8) ನಡೆದ ನಾಲ್ಕೂ ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ಬೋರ್ಡ್ ಮೀಟಿಂಗ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸದಲ್ಲಿ ಇರುವುದರಿಂದ ಅವರು ಬಂದ ಕೂಡಲೇ ಬೋರ್ಡ್ ಮೀಟಿಂಗ್‌ನಲ್ಲಿ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ತಿಳಿಸುವ ಮೂಲಕ ನೌಕರರ ಸಮಸ್ಯೆಯನ್ನು ನಿವಾರಿಸುವ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇನ್ನು ಪ್ರಮುಖವಾಗಿ ಕೆಲ ಪೊಲೀಸ್ ಪ್ರಕರಣಗಳನ್ನು ಹೊರತು ಪಡಿಸಿ ಉಳಿದ ಎಲ್ಲ ನೌಕರರನ್ನು ಮತ್ತೆ ವಾಪಸ್ ತೆಗೆದುಕೊಳ್ಳುವ ಮೂಲಕ ನೌಕರರಿಗೆ ದಸರಾ ಹಬ್ಬಕ್ಕೂ ಮುನ್ನ ಸಿಹಿಸುದ್ದಿ ನೀಡುವುದಾಗಿ ನಂದೀಶ್ ರೆಡ್ಡಿ ಭರವಸೆ ನೀಡಿದ್ದಾರೆ.
ಇನ್ನು ನೌಕರರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಬೋರ್ಡ್ ಮೀಟಿಂಗ್‌ನಲ್ಲಿ ಸುದೀರ್ಘ ಚರ್ಚೆ ಆಗಿದ್ದು, ನೌಕರರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲೂ ಅತೀ ಶೀಘ್ರದಲ್ಲೇ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.