ಬೆಂಗಳೂರು: ಯಡಿಯೂರಪ್ಪ ಮದುವೆ ಊಟ ಮಾಡೇ ಇಲ್ಲ. ಬರೀ ತಿಥಿ ಊಟ ಮಾಡಿದವರು ಅವರು. ಅವರಿಗೆ ಮುಂಬಾಗಿಲಿಂದ ಬಂದು ಗೊತ್ತೇ ಇಲ್ಲ. ಹಿಂಬಾಗಿಲಿಂದ ಬಂದವರೇ. ನಮ್ಮ ಶಾಸಕರನ್ನು ಕರೆದುಕೊಂಡು ಸರ್ಕಾರ ಮಾಡಿದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದರು.
ಪದ್ಮನಾಭ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ದಿನಸಿ ಕಿಟ್ ಗಳ ವಿತರಣಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಯಡಿಯೂರಪ್ಪನವರನ್ನು ವಯಸ್ಸು ಆಗಿದೆ ಎಂದು ಸಿಎಂ ಸ್ಥಾನದಿಂದ ಹೈಕಮಾಂಡ್ ತೆಗೆದಿಲ್ಲ. ಬದಲಾಗಿ ದುಡ್ಡು ಹೊಡೆದ್ರು ಅಂತಾ ತೆಗೆದಿದ್ದು. ಅಪ್ಪ-ಮಗ ಸೇರಿ ಬೇಕಾದಷ್ಟು ಭ್ರಷ್ಟಾಚಾರ ನಡೆಸಿ ಲೂಟಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಐಟಿ, ಇಡಿ ದಾಳಿ ನಡೆಯಬಹುದು ಎಂದು ಹೇಳಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದಾರೆ. ಆರ್ಟಿಜಿಎಸ್ ಮೂಲಕ ಯಡಿಯೂರಪ್ಪ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಲಾಗಿದೆ. ಆದರೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ, ಬಿಜೆಪಿ ಒಂದು ಭ್ರಷ್ಟ ಪಕ್ಷವಾಗಿದ್ದು, ಅದರಲ್ಲಿರುವವರು ಭ್ರಷ್ಟರೇ ಎಂದು ಟೀಕಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಈಗ ಮಾತಾಡಲ್ಲ. ಮೂರ್ನಾಲ್ಕು ತಿಂಗಳು ಬಿಟ್ಟು ಮಾತನಾಡುತ್ತೇನೆ, ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ಯಡಿಯೂರಪ್ಪ. ಹಾಗಾಗಿ ಅವರು ಏನು ಮಾಡ್ತಾರೆ? ನೋಡೋಣ ಎಂದರು.
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸಾವಿರಾರು ಜನರು ಸತ್ತರು, ಇದಕ್ಕೆ ಯಾರು ಕಾರಣ, ಅದನ್ನು ತಡೆಯಬೇಕಾದವರು ಆಡಳಿತ ಪಕ್ಷದಲ್ಲಿರುವ ನಾಯಕರು ಅಧಿಕಾರಿಗಳೊಂದಿಗೆ ಸೇರಿ ಸರಿಯಾಗಿ ಜವಾಬ್ದಾರಿಯಿಂದ ಕೆಲಸ ಮಾಡಿದಾಗ ಮಾತ್ರವಲ್ಲವೇ. ಈ ಕ್ಷೇತ್ರದಲ್ಲಿ ಕೊರೊನಾ ಬರೋಕೆ ಯಾರು ಕಾರಣ, ಶಾಸಕ ಆರ್.ಅಶೋಕ್ ಕಾರಣವಲ್ಲವೇ, ಅವರು ಕಂದಾಯ ಮಂತ್ರಿಯಾಗಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದು ಆರೇಳು ತಿಂಗಳು ಅಷ್ಟೆ, ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು. ಅಶೋಕ ಒಬ್ಬ ಶಾಸಕ ಅಷ್ಟೇ, ಸರ್ಕಾರದ ಹಣವೆಂದರೆ ಜನರ ಹಣ, ಅದು ಜನರ ತೆರಿಗೆ ಹಣ ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ 12 ಕೋಟಿ ಉದ್ಯೋಗ ನಷ್ಟವಾಗಿದೆ, ಮೋದಿ.. ಮೋದಿ ಎಂದು ಜಪ ಮಾಡುತ್ತಿದ್ದ ಯುವಕರಿಗೆ ಇಂದು ಮೋದಿ ಮೂರು ತಿರುಪತಿ ತಿಮ್ಮಪ್ಪ ನಾಮ ಹಾಕಿ ಬಿಟ್ಟಿದ್ದಾರೆ ಎಂದು ಮೂದಲಿಸಿದರು.
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಮಾಜಿ ಸಂಸದ ಪ್ರೊ. ರಾಜೀವ್ ಗೌಡ, ಮುಖಂಡರಾದ ಶಿವಣ್ಣ, ವೆಂಕಟೇಶಮೂರ್ತಿ ಇದ್ದರು.