ಬಸ್ ಟಿಕೆಟ್ ದರ ಹೆಚ್ಚಿಸುವವರಿಗೆ ಜನರ ಬವಣೆ ಗೊತ್ತಿಲ್ಲ : ಮಾಜಿ ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು: ಯಡಿಯೂರಪ್ಪ, ಸಿದ್ದರಾಮಯ್ಯ ಕಾಲದಿಂದಲೂ ಬಸ್ ಟಿಕೆಟ್ ದರ ಹೆಚ್ಚು ಮಾಡಿಕೊಂಡು ಬರುತ್ತಿದ್ದಾರೆ. ಟಿಕೆಟ್ ದರ ಹೆಚ್ಚಿಸೋರಿಗೆ ಜನರ ಬವಣೆ ಗೊತ್ತಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಲೆ ಏರಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅಧಿವೇಶನದಲ್ಲಿ ಮಾತನಾಡಿದ ಅವರು, ಬಸ್‍ಗಳ ಟಿಕೆಟ್ ದರ ಹೆಚ್ಚಿಸುವವರಿಗೆ ಜನರ ಬವಣೆ ಗೊತ್ತಿಲ್ಲ. ವಿಮಾನದ ಟಿಕೆಟ್‍ಗಿಂತ ಈ ಬಸ್‍ಗಳ ಟಿಕೆಟ್ ದರ ಜಾಸ್ತಿ ಯಾಗುತ್ತಿದೆ. ಹಬ್ಬದ ವೇಳೆ ಜನ ಊರುಗಳಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಸರ್ಕಾರಿ ಬಸ್‍ಗಳು ಸಾಲೋದಿಲ್ಲ. ಹಾಗಾಗಿ ಜನ ಖಾಸಗಿ ಬಸ್‍ಗಳ ಮೊರೆ ಹೋಗುತ್ತಾರೆ. ಆಗ ಖಾಸಗಿ ಬಸ್ ಮಾಲೀಕರು ಬಸ್ ದರ ಏರಿಕೆ ಮಾಡುತ್ತಾರೆ ಎಂದು ಬೆಲೆ ಏರಿಕೆ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಮೌರ್ಯ ಸರ್ಕಲ್ ಬಳಿ ನೂರಾರು ಬಸ್ ಗಳಿವೆ ಆದರೂ ಕೂಡ ಅದರ ಟಿಕೆಟ್ ಬೆಲೆ ವಿಮಾನದ ಟಿಕೆಟ್ ಗಿಂತಲೂ ಜಾಸ್ತಿ ಆಗಿತ್ತು. ಗೌರಿ, ಗಣೇಶ ಹಬ್ಬದ ಸಂದರ್ಭದಲ್ಲಿ ಮನಸ್ಸಿಗೆ ಬಂದ ಹಾಗೆ ಬೆಲೆ ಏರಿಕೆ ಮಾಡುವವರಿಗೂ ನಮಗೂ ಸಂಬಂಧ ಇಲ್ಲದಂತಾಗಿದೆ.
ಸಾರಿಗೆ ಇಲಾಖೆ ಎಲ್ಲಿ ಹೋಯಿತು? ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಒಂದೊಂದು ದರ ಇತ್ತು ಕೆಲವು ಕಡೆ ಹೆಣವೂ ಕೊಡಲಿಲ್ಲ. ಅವರಿಗೆ ಶಾಸನದ ಭಯ ಇಲ್ಲದಂತಾಗಿದೆ, ಜನರ ಭಯ ನಮಗೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಎಲ್‍ಕೆಜಿಗೆ ಒಂದು ಲಕ್ಷ ರೂ. ಶಾಲಾ ಶುಲ್ಕ ಕೇಳುತ್ತಾರೆ. ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗಳಿಗೆ ಅವಕಾಶ ಮಾಡಿಕೊಟ್ಟಿದ್ದರ ಪರಿಣಾಮ ಇದು ಈ ರೀತಿ ಆಗಿದೆ.
ಇನ್ನು ಖಾಸಗಿ ಶಾಲೆಗಳಿಗೆ ಅವಕಾಶ ಕೊಟ್ಟು, ಶುಲ್ಕದ ಮೇಲೆ ನಿರ್ಬಂಧ ಹಾಕಲ್ಲ. ಶಿಕ್ಷಣಕ್ಕೊಂದು ಖಾತೆ, ಒಬ್ಬ ಸಚಿವ, ಬಜೆಟ್ ನಲ್ಲಿ ಹಣ ನಿಗದಿ ಮಾಡಿದ್ದೇವೆ ಇದು ಯಾಕೆ ಎಂದು ಪ್ರಶ್ನೆ ಮಾಡಿ, ಬೆಲೆ ಏರಿಕೆಗೆ ನಾವೆಲ್ಲರೂ ಕಾರಣ ಎಂದು ಹೇಳಿದರು.
ಅಲ್ಲದೆ ಬೆಲೆ ಏರಿಕಗೂ ಶಾಲೆಗೂ ಏನು ಸಂಬಂಧ ಎಂದು ಕೇಳಬೇಡಿ ಒಂದಕ್ಕೊಂದು ಬೆಸೆದುಕೊಂಡಿರುವುದನ್ನು ನಾನು ಇಲ್ಲಿ ವಿವರಿಸುತ್ತಿದ್ದೇನೆ ಎಂದೂ ತಿಳಿಸಿದರು.