ಸಾರಿಗೆ 4ನಿಗಮಗಳ ಎಂಡಿಗಳ ಜತೆ ಚರ್ಚೆ: ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ – ಶ್ರೀರಾಮುಲು
ಸಮಸ್ಯೆ ನಿವಾರಣೆಗಾಗಿ ಸಾರಿಗೆ ಸಚಿವರಿಗೆ ಚಳ್ಳಕೆರೆಯಲ್ಲಿ ಮನವಿ ಸಲ್ಲಿಸಿದ ನೌಕರರು
ಚಳ್ಳಕೆರೆ: ತಾಲೂಕಿಗೆ ಆಗಮಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಕರ್ನಾಟಕ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಶನಿವಾರ ಚಳ್ಳಕೆರೆ ಪ್ರವಾಸಿ ಮಂದಿರದಲ್ಲಿ ಕೂಟದ ದಾವಣಗೆರೆ ವಿಭಾಗದ ಪದಾಧಿಕಾರಿಗಳಾದ ದಾದಾಪೀರ್, ಹಾಲೇಶ್, ಓಂಕಾರ್, ರಂಗಸ್ವಾಮಿ ಏಳುಕೋಟಿ ಅವರು ಭೇಟಿ ಮಾಡಿ, ಮುಷ್ಕರದ ವೇಳೆ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್ ಪ್ರಕರಣಗಾಳಾಗಿರುವುದನ್ನು ವಾಪಸ್ ಪಡೆದು ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಅದಕ್ಕೆ ಸಕರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ನಾವು ಎಲ್ಲಿ ಹೋಗುತ್ತೇವೋ ಅಲ್ಲರಲ್ಲ ಪದೇಪದೆ ನಮ್ಮನ್ನು ಭೇಟಿ ಮಾಡಲು ಬರುತ್ತಿದ್ದೀರ, ಹೀಗಾಗಿ ನಿಮ್ಮ ಸಮಸ್ಯೆ ನನಗೆ ಅರ್ಥವಾಗಿದೆ. ಇನ್ನು ಮುಂದೆ ಹೀಗೆ ಭೇಟಿ ಮಾಡಲು ಬರಬೇಡಿ ಆದಷ್ಟು ಶೀಘ್ರದಲ್ಲೇ ನಿಮ್ಮ ಎಲ್ಲ ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಅಲ್ಲದೆ ಈ ಸಂಬಂಧ ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳೊಂದಿಗೆ ಚರ್ಚಿಸಿದ್ದೇನೆ, ಮತ್ತೊಮ್ಮೆ ಚರ್ಚಿಸಿದ ಬಳಿಕ ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ ಒಂದು ಶಾಶ್ವತವಾದ ಪರಿಹಾರಕ್ಕಾಗಿ ಈ ರೀತಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂದು ಕೂಟದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.
ಇನ್ನು ನಾನು ಎಲ್ಲಿ ಹೋಗುತ್ತೇವೆ ಅಲ್ಲಿಗೆಲ್ಲ ನೀವು ಬಂದು ಮನವಿ ಕೊಡುವುದು ಬೇಕಿಲ್ಲ. ನಮಗೆ ನಿಮ್ಮ ಎಲ್ಲ ಸಮಸ್ಯೆ ಅರ್ಥವಾಗಿದೆ. ಅದನ್ನು ಶೀಘ್ರದಲ್ಲೇ ನಿವಾರಿಸುತ್ತೇನೆ ಎಂದು ಹೇಳಿದ್ದಾರೆ. ಸಚಿವರು ಕೊಟ್ಟ ಭರವಸೆಯನ್ನು ಈ ಹಿಂದಿನಿಂದಲೂ ಅಂದರೆ ಕಳೆದ ಒಂದು ತಿಂಗಳಿನಿಂದಲೂ ನೌಕರರು ನಂಬಿಕೊಂಡು ಬರುತ್ತಿದ್ದಾರೆ.
ಅವರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾದರೆ ನಾವು ಬಂದ ಕಡೆಯಲ್ಲ ಮನವಿ ಕೊಡಬೇಡಿ ಎನ್ನುವ ಬದಲಿಗೆ ಅವರ ಸಮಸ್ಯೆಯನ್ನು ಬಗೆಹಸಬೇಕಿದೆ. ಆ ನಿಟ್ಟಿನಲ್ಲಿ ಈಗಾಗಲೇ ತಿಂಗಳುಗಳು ಜಾರಿಹೋಗುತ್ತಿವೆ. ನೀವು ನೌಕರರ ತಾಳ್ಮೆಯನ್ನು ಪರೀಕ್ಷಿಸದೆ ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂಬುವುದು ವಿಜಯಪಥದ ಕಳಕಳಿ.