ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ಡಾ. ಶಿವರಾಜ್ ಕುಮಾರ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 59ನೇ ವಸಂತಕ್ಕೆ ಕಾಲಿಟ್ಟಿರುವ ಶಿವರಾಜ್ ಕುಮಾರ್ ಅವರು ಈ ವರ್ಷ ಕೊರೊನಾದಿಂದ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.
ವಯಸ್ಸು 59 ಆದರೂ ತಮ್ಮ ನಟನೆ, ಡ್ಯಾನ್ಸ್ ಜೊತೆಗೆ ಸದಾ ಆ್ಯಕ್ಟಿವ್ ಆಗಿರುವ ಅವರು, ಇನ್ನೂ 19ರ ಹರೆಯದ ಉತ್ಸಾಹದಲ್ಲಿದ್ದು, ಸಾಲು ಸಾಲು ಸಿನಿಮಾಗಳೊಂದಿಗೆ ಫುಲ್ ಬಿಸಿಯಾಗಿದ್ದಾರೆ.
ಈಗಾಗಲೇ ಶಿವರಾಜ್ ಕುಮಾರ್ ನಟಿಸಿರುವ ಭಜರಂಗಿ 2 ಚಿತ್ರ ಬಿಡುಗಡೆಗೆ ಸಿದ್ಧವಾಗಿ ನಿಂತಿದ್ದು, ಈ ನಡುವಲ್ಲೇ ಶಿವಣ್ಣ ಅವರು ತಮ್ಮ 123ನೇ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ಸಜ್ಜಾಗಿದ್ದಾರೆ. ಈ ಚಿತ್ರದ ಟೈಟಲ್’ನ್ನು ಇಂದು ಪುನೀತ್ ರಾಜ್ ಕುಮಾರ್ ಅವರು ಇಂದು ಅನಾವರಣಗೊಳಿಸಲಿದ್ದಾರೆ.
ಇನ್ನು ಶಿವಣ್ಣ ಅವರ 124 ಚಿತ್ರವನ್ನು ತೆಲುಗು ನಿರ್ದೇಶಕ ರಾಮ್ ಧುಲಿಪುಡಿಯವರು ನಿರ್ದೇಶಿಸುತ್ತಿದ್ದು, 125ನೇ ಚಿತ್ರವನ್ನು ಹರ್ಷ ನಿರ್ದೇಶಿಸುತ್ತಿದ್ದಾರೆ. ಇದರ ಜೊತೆಗೆ ಮತ್ತಷ್ಟು ಸಿನಿಮಾಗಳಲ್ಲಿ ನಟಿಸಲೂ ಶಿವಣ್ಣ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ತಿಳಿದುಬಂದಿದೆ.
ನಂದ ಕಿಶೋಸ್, ಎಸ್. ನಾರಾಯಣ್, ರಿಷಬ್ ಶೆಟ್ಟಿ, ಎಚ್. ಲೋಹಿತ್ ಹಾಗೂ ಹೊಸ ನಿರ್ದೇಶಕರ ಸಿನಿಮಾಗಳಲ್ಲೂ ನಟಿಸಲು ಶಿವಣ್ಣ ಒಪ್ಪಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ನಿರ್ದೇಶಕರು ಹಾಗೂ ನಿರ್ಮಾಪಕರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಯನ್ನು ಹೇಳಲು ಸಾಧ್ಯವಿಲ್ಲ. ಸ್ಟಾರ್ ನಿರ್ದೇಶಕರನ್ನು ಮಾತ್ರ ಭೇಟಿಯಾಗಲು ಬಯಸುವ ನಟ ನಾನಲ್ಲ. ಈ ಪ್ರೀತಿಗೆ ಇದೂ ಒಂದು ಕಾರಣವಿರಬಹುದು. ಹೊಸಬರಾಗಲೀ, ಪ್ರಸಿದ್ಧ ನಿರ್ದೇಶಕರಾಗಲಿ ಒಳ್ಳೆಯ ಕಥೆಗಳನ್ನು ಹೊಂದಿರುವ ಯಾವುದೇ ನಿರ್ಮಾಪಕರನ್ನು ನಾನು ಸ್ವಾಗತಿಸುತ್ತೇನೆ ಎಂದು ಶಿವಣ್ಣ ಹೇಳಿದ್ದಾರೆ.
ಸೃಜನಶೀಲ ವ್ಯಕ್ತಿಗಳಿಗೆ ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ. ನಾನು ಅವರೊಂದಿಗೆ ಸಿನಿಮಾ ಮಾಡಿದ್ದರೂ, ಮಾಡದಿದ್ದರೂ ಪ್ರತೀಯೊಬ್ಬ ನಿರ್ದೇಶಕನನ್ನೂ ನಾನು ಗೌರವಿಸುತ್ತೇನೆ. ಪ್ರತೀಯೊಂದು ಚಿತ್ರಕಥೆ ಆಯ್ಕೆ ಮಾಡುವುದಕ್ಕೂ ಕಾಲಾವಕಾಶ ತೆಗೆದುಕೊಳ್ಳುತ್ತೇನೆ. ಯಾರೊಬ್ಬರೂ ಬೇಸರಗೊಳ್ಳುವಂತೆ ಮಾಡುವುದಿಲ್ಲ. ಕೊರೊನಾ 2ನೇ ಲಾಕ್ಡೌನ್ ನಲ್ಲಿ 15-20 ಸ್ಕ್ರಿಪ್ಟ್ ಗಳನ್ನು ಓದಿದ್ದೇನೆಂದು ತಿಳಿಸಿದ್ದಾರೆ.
ಇದೇ ವೇಳೆ ಭಜರಂಗಿ 2 ಚಿತ್ರ ಕುರಿತು ಮಾತನಾಡಿದ ಅವರು, ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಚಿತ್ರ ನೋಡಲು ಬಹಳ ಉತ್ಸುಕನಾಗಿದ್ದೆ. ಚಿತ್ರ ನೋಡಿದ ಬಳಿಕ ಹರ್ಷ ಅವರೊಂದಿಗೆ ಮಾತನಾಡದೆ ಇರಲು, ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸದೆ ಇರಲು ಸಾಧ್ಯವಾಗಲಿಲ್ಲ. ನಾನು ಮಾಡಿದ ಸಿನಿಮಾ ಎಂದು ನಾನು ಹೇಳುತ್ತಿಲ್ಲ. ಪ್ರತೀಯೊಬ್ಬ ನಟ ಉತ್ತಮವಾಗಿ ಪಾಲ್ಗೊಳ್ಳುವಂತೆ ಹರ್ಷ ಮಾಡಿದ್ದಾರೆ.
ಹೊಸ ಕಲಾವಿದರು ಪ್ರತಿಭೆ ತೋರಿಸಲು ಅವಕಾಶ ಮಾಡಿಕೊಡಲಾಗಿದೆ. ಸಿನಿಮಾ ಮೂಡಿ ಬಂದಿರುವ ರೀತಿ ಬಹಳ ಸಂತಸ ತಂದಿದೆ. ಕೊರೊನಾ ಕಾರಣದಿಂದ ಚಿತ್ರ ಬಿಡುಗಡೆಗೆ ಕಾಲಾವಕಾಶ ತೆಗೆದುಕೊಳ್ಳಲಿದೆ. ಚಿತ್ರಮಂದಿರಕ್ಕೆ ಸಿನಿಮಾ ಬಂದ ಕೂಡಲೇ ಪ್ರೇಕ್ಷಕರನ್ನಂತೂ ಚಿತ್ರ ಬೇಸರಗೊಳ್ಳುವಂತೆ ಮಾಡುವುದಿಲ್ಲ ಎಂದು ವಿಶ್ವಾಸದ ನುಡಿಗಳನ್ನಾಡಿದರು.
ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಅವರು ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ದೇವರ ದಯೆಯಿಂದ ಕೊರೊನಾ ಕಡಿಮೆಯಾಗಿದೆ. ಹಾಗಂತ ನಾವು ಎಚ್ಚರಿಕೆಯಿಂದ ಇರಬೇಕಾದ ಸಮಯ ಇನ್ನೂ ಮುಗಿದಿಲ್ಲ. ಮುಂದೆ ಇನ್ನೂ ಎಚ್ಚರಿಕೆಯಿಂದ ಇರಬೇಕಾಗಿದೆ.
ನಿಮಗೆಲ್ಲರಿಗೂ ಗೊತ್ತಿರುವಂತೆ ಜುಲೈ 12 ರಂದು ನನ್ನ ಹುಟ್ಟಿದ ದಿನ. ಕಾರಣಾಂತರಗಳಿಂದ ನಾನು ಬೆಂಗಳೂರಿನಲ್ಲಿ ಇರಲ್ಲ. ದಯವಿಟ್ಟು ಯಾರೂ ಬೇಜಾರು ಮಾಡಿಕೊಳ್ಳಬೇಡಿ. ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡಲ್ಲ. ಹೀಗಾಗಿ ಯಾರೂ ಕೂಡ ಮನೆ ಬಳಿ ಬರಬೇಡಿ ಎಂದು ಮನವಿ ಮಾಡಿದ್ದರು.