ಬೆಂಗಳೂರು: ಸಿಎಂ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಜೆಡಿಎಸ್ ವರಿಷ್ಠ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲದ ಜತೆಗೆ ಸಂಚಲನ ಮೂಡಿಸಿದೆ.
ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಶಾಸಕರೊಂದಿಗೆ ಸಿಎಂ ನಿವಾಸಕ್ಕೆ ತೆರಳಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸಿಎಂ ಭೇಟಿ ನಂತರ ಮಾತನಾಡಿದ ಎಚ್‌ಡಿಕೆ, ಮೈಷುಗರ್ ಕಾರ್ಖಾನೆ ವಿಚಾರವಾಗಿ ಮಂಡ್ಯ ಜಿಲ್ಲೆಯ ರೈತ ಹಿತರಕ್ಷಣಾ ಸಮಿತಿ ಸದಸ್ಯರು ನನ್ನನ್ನು ಭೇಟಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯದ ಶಾಸಕರು, ವಿಧಾನಪರಿಷತ್ ಸದಸ್ಯರೊಂದಿಗೆ ನಾನು ಸಿಎಂ ಭೇಟಿಯಾದೆ ಎಂದು ಹೇಳಿದರು.
ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿಕೊಡುವ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಅದು ಐತಿಹಾಸಿಕ ಕಾರ್ಖಾನೆ ಸರ್ಕಾರದ ವ್ಯಾಪ್ತಿಯಲ್ಲೇ ಇರಬೇಕು ಯಾವುದೇ ಕಾರಣಕ್ಕೂ ಖಾಸಗಿ ಮಾಡಬೇಡಿ ಎಂದು ಸಿಎಂಗೆ ಮನವಿ ಮಾಡಿದ್ದೇನೆ. ಇನ್ನು ಕಾರ್ಖಾನೆ ಖಾಸಗಿಯವರ ಪಾಲಾಗಲು ಅವಕಾಶ ನೀಡುವುದಿಲ್ಲ ಎಂದು ಸಿಎಂ ನನಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.