ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೇಕೆದಾಟು ಯೋಜನೆ ಈಗಾಗಲೇ ಆರಂಭವಾಗಬೇಕಿತ್ತು. ಆದರೆ, ರಾಜ್ಯ ಸರ್ಕಾರದ ಹೇಳಿಕೆಗಳು ಕೇವಲ ಘೋಷಣೆಯಾಗಿ ಉಳಿದಿವೆ. ಈ ಮೇಕೆದಾಟು ಯೋಜನೆ ಒಂದೇ ಅಲ್ಲ, ಎತ್ತಿನಹೊಳೆ ಯೋಜನೆಯಲ್ಲೂ ಹಲವು ಸಮಸ್ಯೆಗಳು ಇವೆ. ಈ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಚರ್ಚಿಸುತ್ತೇನೆ ಎಂದರು.
ಈಗಾಗಲೇ ಮೇಕೆದಾಟು ಯೋಜನೆ ಆರಂಭ ಮಾಡಬೇಕಿತ್ತು. ಆದರೆ, ರಾಜಕೀಯವಾಗಿ ಹಲವು ಸಮಸ್ಯೆಗಳನ್ನು ಈ ಸರ್ಕಾರ ಅನುಭವಿಸುತ್ತಿದೆ. ಈಗಾಗಲೇ ರಾಜ್ಯಪಾಲರನ್ನು ಕೂಡ ಭೇಟಿ ಮಾಡಿದ್ದೇವೆ. ರಾಷ್ಟ್ರಪತಿಗಳು, ಕೇಂದ್ರ ಸರ್ಕಾರ ಮನವೊಲಿಸಲು ಕ್ರಮವಹಿಸಬೇಕೆಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಎತ್ತಿನ ಹೊಳೆ ಯೋಜನೆಯಲ್ಲೂ ಹಲವಾರು ಸಮಸ್ಯೆಗಳು ಇವೆ. ಅದು 8 ಸಾವಿರ ಕೋಟಿ ರೂ.ಗಳಲ್ಲಿ ಪ್ರಾರಂಭವಾದ ಕಾರ್ಯಕ್ರಮ. ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ನೀರು ಕೊಡುತ್ತೇವೆ ಎಂದು ಆರಂಭವಾದ ಕಾರ್ಯಕ್ರಮ ಇದೀಗ 23 ಸಾವಿರ ಕೋಟಿ ರೂ.ಗಳಿಗೆ ಏರಿಕೆ ಆಗಿದೆ. ಈಗಿನ ವೇಗದಲ್ಲಿ ಹೋದರೆ ಎತ್ತಿನಹೊಳೆ ಯೋಜನೆಗೆ ಒಟ್ಟು 50 ಸಾವಿರ ಕೋಟಿ ರೂ.ಬೇಕು. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಅವರ ಸಮಯ ಕೇಳಿದ್ದೇನೆ. ನೀರಾವರಿ ಸಮಸ್ಯೆಯನ್ನು ಬಗೆಹರಿಸುವಂತೆ ಚರ್ಚೆ ಮಾಡುತ್ತೇನೆ ಎಂದರು.
ಇನ್ನು ಜಾತಿಗಣತಿ ವರದಿ ವಿಚಾರವಾಗಿ ತಮ್ಮ ವಿರುದ್ಧ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರಾಜಕಾರಣ ಮಾಡುವುದಾಗಿ ಹೇಳುವ ಸಿದ್ದರಾಮಯ್ಯ, ಅಸಲಿಗೆ ಈ ವರ್ಗಕ್ಕೆ ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದ್ದಾರೆ.
ಅಲ್ಲದೆ ಸಿದ್ದರಾಮಯ್ಯನವರಿಗೆ ಮಾಡಲು ಬೇರೆ ಕೆಲಸವಿಲ್ಲ, ಎಲ್ಲದರಲ್ಲೂ ರಾಜಕೀಯ ಬೆರೆಸಬೇಕು ಎನ್ನುವುದಾದರೆ ನಾನು ದೊಡ್ಡ ಮಟ್ಟದಲ್ಲಿ ರಾಜಕೀಯ ಬೆರೆಸಬಲ್ಲೆ ಎಂದು ಪರೋಪಕ್ಷ ಎಚ್ಚರಿಕೆ ನೀಡಿದರು.