ಬೆಂಗಳೂರು: ರಾಜ್ಯದಲ್ಲಿ ಪದವಿ ಕಾಲೇಜುಗಳ ಆರಂಭ ಬಗ್ಗೆ ಇನ್ನು ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ, ಹೀಗಾಗಿ ಯಾರಿಗೂ ಗೊಂದಲ ಬೇಡ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಮಾತ್ರ ಸರ್ಕಾರದ ಆದ್ಯತೆಯಾಗಿದೆ. ಅದರ ಹೊರತಾಗಿ ಕಾಲೇಜುಗಳನ್ನು ಆರಂಭಿಸುವುದಲ್ಲ. ಕೊರೊನಾ ಇನ್ನೂ ಸಂಪೂರ್ಣವಾಗಿ ನಿವಾರಣೆ ಆಗದಿರುವುದರಿಂದ ಕಾಲೇಜುಗಳ ಆರಂಭದ ಬಗ್ಗೆ ಯಾವ ತೀರ್ಮಾನಕ್ಕೂ ಬಂದಿಲ್ಲ ಎಂದು ಹೇಳದಿರು.
ರಾಜ್ಯದ ಆರು ಶೈಕ್ಷಣಿಕ ವಲಯಗಳ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ 4.90 ಲಕ್ಷ ವಿದ್ಯಾರ್ಥಿಗಳು, 29,241 ಸಿಬ್ಬಂದಿ ಇದ್ದಾರೆ. ಈ ಪೈಕಿ ಈವರೆಗೆ 3.13 ಲಕ್ಷ ವಿದ್ಯಾರ್ಥಿಗಳು, 24,875 ಸಿಬ್ಬಂದಿ ವರ್ಗದವರು ಲಸಿಕೆ ಹಾಕಿಸಿಕೊಂಡಿದ್ದಾರೆ. ಈವರೆಗೆ ಶೇ 65.14ರಷ್ಟು ಗುರಿ ತಲುಪಲಾಗಿದೆʼ ಎಂದು ವಿವರಿಸಿದರು.
ಸರ್ಕಾರ ಕೋವಿಡ್ ಲಸಿಕೆ ಬಗ್ಗೆ ವಿಶೇಷ ಒತ್ತು ನೀಡಿ ಆದ್ಯತಾ ಗುಂಪಿನ ಅಡಿಯಲ್ಲಿ ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಕೊಡುತ್ತಿದೆ. ಕೆಲ ದಿನಗಳಲ್ಲೇ ಶೇ.100ರಷ್ಟು ಗುರಿ ಸಾಧಿಸಲಾಗುತ್ತದೆ. ಖಾಸಗಿ ಕಾಲೇಜುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಎಂಬುದರ ಕುರಿತ ಅಂಕಿ-ಅಂಶ ಪಡೆದುಕೊಳ್ಳುತ್ತಿದ್ದೇವೆ. ಆ ಮಾಹಿತಿ ಸಿಕ್ಕ ಕೂಡಲೇ ಉಳಿದ ವಿದ್ಯಾರ್ಥಿಗಳಿಗೆ ಇನ್ನೆಷ್ಟು ದಿನಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸುತ್ತೇವೆ ಎಂದರು.