ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವಕ್ಕೆ ಗ್ರೀನ್‌ಸಿಗ್ನಲ್ ಸಿಕ್ಕಿದ್ದು, 5 ದಿನ ಮಾತ್ರ ಗಣೇಶೋತ್ಸವಕ್ಕೆ ಅವಕಾಶ ಕೊಡಲಾಗಿದೆ. ಆದರೆ, ಮೆರವಣಿಗೆಗೆ, ಮನರಂಜನೆ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕೋ? ಬೇಡವೋ? ನೀಡುವುದಾದರೆ ಏನೆಲ್ಲಾ ಮಾರ್ಗಸೂಚಿ ಪಾಲಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆಯಲ್ಲಿ ಅಂತಿಮ ತೀರ್ಮಾನ ಹೊರಬಿದ್ದಿದೆ.
ಸಂಘ, ಸಂಸ್ಥೆಗಳಿಂದ ಭಾರೀ ಒತ್ತಡ ಇದ್ದ ಹಿನ್ನೆಲೆಯಲ್ಲಿ ಅಂತಿಮವಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಲಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಒಂದೇ ಗಣೇಶ ಮೂರ್ತಿ ಪೂಜಿಸಬೇಕು ಬೀದಿಗೊಂದರಂತೆ ಪೂಜಿಸುವುದನ್ನು ನಿರ್ಬಂಧಿಸಲಾಗಿದೆ.
ಸಭೆಯಲ್ಲಿ ತಜ್ಞರಾದ ಡಾ.ದೇವಿಶೆಟ್ಟಿ, ಡಾ.ಮಂಜುನಾಥ್, ವೈರಾಲಜಿಸ್ಟ್ ಡಾ.ರವಿ, ಡಾ.ಸುದರ್ಶನ್, ಕಂದಾಯ ಸಚಿವ ಅಶೋಕ್, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದು, ಈ ವೇಳೆ ಗಣಪತಿ ಮೂರ್ತಿಗಳನ್ನು ನಿಗದಿತ ಸ್ಥಳಗಳಲ್ಲಿ ಮಾತ್ರ ವಿಸರ್ಜನೆ ಮಾಡಲು ಅವಕಾಶ ನೀಡಲು ನಿರ್ಧರಿಸಲಾಗಿದ್ದು, ಬಿಬಿಎಂಪಿ, ಜಿಲ್ಲಾಡಳಿತ ಸೂಚಿಸಿದ ಸ್ಥಳದಲ್ಲಿಯೇ ವಿಸರ್ಜಿಸಬೇಕು ಎಂದು ನಿರ್ಧಾರ ಮಾಡಲಾಗಿದೆ.
ರಾಜ್ಯದಲ್ಲಿ 5 ದಿನ ಮಾತ್ರ ಸರಳವಾಗಿ ಗಣೇಶೋತ್ಸವ ಇರಲಿದೆ. ಸಾರ್ವಜನಿಕ ಸ್ಥಳದಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೂ ಅದು ಸರಳವಾಗಿ ಇರಬೇಕು. ಅದ್ದೂರಿ ಆಚರಣೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
ಬೀದಿಗೊಂದರಂತೆ ಗಣಪತಿ ಕೂರಿಸುವಂತಿಲ್ಲ: ಸಾರ್ವಜನಿಕ ಸ್ಥಳದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರದ ಅನುಮತಿ ಸಿಕ್ಕಿದೆಯಾದರೂ ಬೀದಿಗೆ ಒಂದರಂತೆ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಸರಳವಾಗಿ ಗಣೇಶೋತ್ಸವ ಆಚರಣೆ ಮಾಡಬೇಕು, ಏರಿಯಾಗೆ ಇಂತಿಷ್ಟೇ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯವಾಗಿದ್ದು, ಬಿಬಿಎಂಪಿ, ಜಿಲ್ಲಾಡಳಿತದ ಅನುಮತಿ ಪಡೆಯಲೇಬೇಕು ಎಂದು ತಿಳಿಸಿದ್ದಾರೆ.
ಇನ್ನು ಮನರಂಜನೆ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಕೊರೊನಾ ಸೋಂಕು ನಿರೋಧಕ ಲಸಿಕೆ ಹಾಕಿಕೊಂಡಿರಬೇಕು. ಕೊರೊನಾ ಪಾಸಿಟಿವಿಟಿ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ ಎಂಬ ಸೂಚನೆಯನ್ನು ನೀಡಲಾಗಿದೆ.