ಬೆಂಗಳೂರು: ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಮೇಲೆ ನಮಗೆ ಮಮತೆಯೂ ಇಲ್ಲ, ದ್ವೇಷವೂ ಇಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡಬೇಕೋ ಬೇಡವೋ ಎಂಬ ಬಗ್ಗೆ ಸಿಎಂ ತೀರ್ಮಾನ ಮಾಡುತ್ತಾರೆ. ಇನ್ನು ಕ್ಯಾಂಟೀನ್ ಹೆಸರನ್ನು ನಾಳೆಯೇ ಬದಲಾವಣೆ ಮಾಡುತ್ತೇವೆಂದು ಸಿಎಂ ಹೇಳಿಲ್ಲ.ಈ ಬಗ್ಗೆ ಸಿಎಂ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ನಾವೆಲ್ಲ ಬದ್ಧ ಎಂದು ತಿಳಿಸಿದರು.
ಮಿತ್ರಮಂಡಳಿಯಲ್ಲಿ ಕೆಲವರಿಗೆ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ಪ್ರತಿಕ್ರಿಯಿಸಿದ ಹೆಬ್ಬಾರ್, ಈ ಬಗ್ಗೆ ಸಿಎಂ ಜತೆ ಚರ್ಚೆ ಮಾಡಿದ್ದೇವೆ. ಅತಿ ಶೀಘ್ರದಲ್ಲಿ ಒಳ್ಳೆಯ ನಿರ್ಧಾರ ಪ್ರಕಟಿಸಲಿದ್ದಾರೆ ಸಿಎಂ. ನಮ್ಮ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುತ್ತದೆ. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದ ವಿಚಾರ ಕೊರ್ಟ್ ನಲ್ಲಿದೆ. ಎಲ್ಲವೂ ಮುಗಿದ ಮೇಲೆ ಸಚಿವ ಸ್ಥಾನ ಸಿಗುತ್ತದೆ ಎಂದು ಸ್ಪಷ್ಟಪಡಿಸಿದರು.