ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ನಡೆಸಿದ ವೇಳೆ ವಿನಾಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹಗಲು ರಾತ್ರಿ ನಾಗರಿಕರನ್ನು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ತಲುಪಿಸುವ ಈ ನೌಕರರು ತಮಗೂ ಉಳಿದವರಂತೆ ಸಂಬಳ, ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಕೇಳಿದರು ಎಂಬ ಕಾರಣಕ್ಕೆ ಸರ್ಕಾರ ಇಷ್ಟೊಂದು ಉಗ್ರ ಕ್ರಮ ತೆಗೆದುಕೊಂಡಿರುವುದು ಮಾನವೀಯ ಕೃತ್ಯವೆನಿಸುವುದಿಲ್ಲ ಎಂದು ತಿಳಿಸಿದ್ದಾರೆ.
ನೌಕರರ ಮೇಲಿನ ಶೀಸ್ತು ಕ್ರಮ ಕುರಿತಂತೆ ಉಚ್ಚನ್ಯಾಯಾಲಯವು ಸಹ ಸಾರಿಗೆ ನಿಗಮಗಳ ನೌಕರರ ಮೇಲೆ ಕೈಗೊಂಡಿರುವ ಉಗ್ರ ಕ್ರಮಗಳ ವಿರುದ್ಧವಾಗಿಯೇ ಆದೇಶ ಮಾಡಿದೆ. ಆದರೆ ಈವರೆಗೂ ಕೂಡ ಸರ್ಕಾರ ಬೀದಿಗೆ ಬಂದಿರುವ ನೌಕರರ ಬದುಕಿನ ಕುರಿತು ಸಮರ್ಪಕವಾದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಈ ಅಮಾನವೀಯ ಕೃತ್ಯದ ಕುರಿತು ಅಧಿವೇಶನದಲ್ಲಿ ಚರ್ಚಿಸಲು ಸಾರ್ವಜನಿಕರ ಹಿತದೃಷ್ಟಿಯಿಂದ ಅತಿ ಮುಖ್ಯ ಹಾಗೂ ಜರೂರಾಗಿದೆ. ಆದ್ದರಿಂದ ಸೆ.22ರಂದು ಮುಖ್ಯಮಂತ್ರಿಯವರ ಗಮನ ಸೆಳೆಯಲು ಸೂಚನೆ ನೀಡುತ್ತಿದ್ದೇನೆ ಹಾಗೂ ಈ ಕುರಿತು ಹೇಳಿಕೆ ನೀಡಬೇಕು ಎಂದು ಸಚಿವರನ್ನು ಕೋರುತ್ತೇನೆ ಎಂದು ಸಿದ್ದರಾಮಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೆ.21ರಂದು ಲಿಖಿತವಾಗಿ ಕೋರಿದ್ದರು.
ಮುಖ್ಯ ಕಾರ್ಯದರ್ಶಿಗಳು ಸಹ ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ 73ನೇ ನಿಯಮದ ಮೇರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ವಿಷಯ ಕುರಿತು ಚರ್ಚಿಸಲು ಅಂಗೀಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಧಿವೇಶನದಲ್ಲಿ ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿ, ಸಾರಿಗೆ ನೌಕರರ ಮುಷ್ಕರ ಆಗದಂತೆ ಸರ್ಕಾರ ನೋಡಿಕೊಳ್ಳಬೇಕಿತ್ತು. ಮುಷ್ಕರ ಮಾಡಿದವರ ಮೇಲೆ ಕ್ರಮ ತೆಗೆದುಕೊಂಡಿದ್ದು, ಅವರ ಜೀವನ ದುಸ್ತರವಾಗಿದೆ. ಬಸ್ ಸುಟ್ಟು, ಸಾರ್ವಜನಿಕ ಆಸ್ತಪಾಸ್ತಿ ನಾಶ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಿ, ಆದರೆ, ಮುಗ್ಧರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಹೇಳಿದರು.
ಈ ವೇಳೆ ಸಚಿವ ಶ್ರೀರಾಮುಲು ಉತ್ತರಿಸಿ, ಸಾರಿಗೆ ನೌಕರರು ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆಸಿದ ಮುಷ್ಕರದ ವೇಳೆ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದು ಹೇಳಿದ್ದಾರೆ.
ಸಾರಿಗೆ ಮುಷ್ಕರ ಸಂದರ್ಭದಲ್ಲಿ ಒಟ್ಟು 6,444 ಪ್ರಕರಣ ದಾಖಲಾಗಿದ್ದವು. ಕೆಎಸ್ಆರ್ಟಿಸಿಯಲ್ಲಿ 1,440 ಪ್ರಕರಣಗಳು, ಬಿಎಂಟಿಸಿಯಲ್ಲಿ 3,780 ಪ್ರಕರಣಗಳು, ಎನ್‌ಡಬ್ಲ್ಯು ಆರ್ಟಿಸಿಯಲ್ಲಿ 865 ಪ್ರಕರಣಗಳು, ಕೆಕೆಆರ್‌ಟಿಸಿಯಲ್ಲಿ 340 ಪ್ರಕರಣಗಳು ದಾಖಲಾಗಿದ್ದವು.
ಈ ಬಗ್ಗೆ ನೌಕರರ ಯೂನಿಯನ್ ಜತೆ ಮಾತುಕತೆ ಬಳಿಕ ಸಿಎಂ ಜತೆಗೂ ಚರ್ಚಿಸಿದ್ದೇ ನೆ. ಪರಿಶೀಲನೆ ನಡೆಸಿ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ನಾಲ್ಕು ನಿಗಮಗಳ ಎಂಡಿಗಳ ಜತೆಗೂ ಚರ್ಚೆ ನಡೆಸಿ ಪರಿಶೀಲನೆ ನಡೆಸಲಾಗಿದೆ. 4,340 ಪ್ರಕರಣ ಇತ್ಯರ್ಥಗೊಳಿಸಲಾಗಿದ್ದು, ಇನ್ನೂ 2,100 ಪ್ರಕರಣಗಳು ಬಾಕಿ ಇವೆ. ಅವುಗಳನ್ನೂ ಶೀಘ್ರ ಇತ್ಯರ್ಥಗೊಳಿಸಲು ಮತ್ತು ಪರಿಶೀಲನೆ ನಡೆಸಿ ಪ್ರಕರಣ ವಾಪಸ್ ಪಡೆಯಲು ಕ್ರಮ ವಹಿಸಿಲಾಗುವುದು ಎಂದು ಹೇಳಿದರು.