NEWSನಮ್ಮರಾಜ್ಯರಾಜಕೀಯಶಿಕ್ಷಣ-

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಮಾಯ: ಸಿದ್ದರಾಮಯ್ಯ ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿಯ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕನ್ನಡಿಗರಿಗೆ ದ್ರೋಹ ಬಗೆಯುತ್ತಾ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS)ಯ ಇತ್ತೀಚಿನ ಸುತ್ತೋಲೆ ಈ ದ್ರೋಹಕ್ಕೆ ಸಾಕ್ಷಿ. ಕೇಂದ್ರ ಸರ್ಕಾರ ತಕ್ಷಣ ಗಮನಹರಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಐಬಿಪಿಎಸ್ ಇದೀಗ ಹನ್ನೊಂದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 3000 ಕಾರಕೂನ ಹುದ್ದೆಗಳಿಗೆ ಅರ್ಜಿ ಆಹ್ಹಾನಿಸಿದ್ದು ಇವುಗಳಲ್ಲಿ 407 ಹುದ್ದೆಗಳು ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಕನ್ನಡಕ್ಕೆ ಆಗಿರುವ ಅನ್ಯಾಯದಿಂದಾಗಿ ತೀವ್ರ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗ ಯುವಜನರು ಉದ್ಯೋಗದ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂದಯ ತಿಳಿಸಿದ್ದಾರೆ.

2014ಕ್ಕಿಂತ ಮೊದಲು IBPS ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ರಾಜ್ಯಭಾಷೆಗಳಲ್ಲಿಯೂ ಬರೆಯುವ ಅವಕಾಶ ಇತ್ತು. 2014ರಲ್ಲಿ ಕೇಂದ್ರ ಸರ್ಕಾರ ನಿಯಮಾವಳಿಗೆ ತಿದ್ದುಪಡಿ ಮಾಡಿ ಇಂಗ್ಲಿಷ್ ಮತ್ತು ಹಿಂದಿಯೇತರ ಭಾಷಿಕ ಯುವಜನರಿಗೆ ಅನ್ಯಾಯಮಾಡಿದೆ. ಈ ಅನ್ಯಾಯವನ್ನು ಪ್ರತಿಭಟಿಸಿ ಹಿಂದಿನ ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರವನ್ನೂ ಬರೆದಿತ್ತು.

ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಗಮನಸೆಳೆದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸುವ ಭರವಸೆಯನ್ನು ಲೋಕಸಭೆಯಲ್ಲಿ ನೀಡಿದ್ದರೂ ಆ ಭರವಸೆಯನ್ನು ಇಂದಿಗೂ ಈಡೇರಿಸಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ಯೋಜನೆಗಳ ಅನುಷ್ಠಾನ ಬ್ಯಾಂಕ್ ಗಳ ಮೂಲಕವೇ ನಡೆಯುವುದರಿಂದ ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆ ಹೆಚ್ಚುಹೆಚ್ಚು ಬ್ಯಾಂಕನ್ನು ಅವಲಂಬಿಸಿದ್ದಾರೆ. ಕನ್ನಡ ಬಾರದ ಸಿಬ್ಬಂದಿಯಿಂದಾಗಿ ಈ ಜನಸಮುದಾಯ ಪ್ರತಿನಿತ್ಯ ಕಿರುಕುಳ ಅನುಭವಿಸುತ್ತಿದೆ ಎಂದು ವಿವರಿಸಿದ್ದಾರೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತೆ ಮತ್ತೆ ಕನ್ನಡ-ಕರ್ನಾಟಕಕ್ಕೆ ಅನ್ಯಾಯ ಎಸಗುತ್ತಾ ಬಂದಿದ್ದಾರೆ. ಇದೀಗ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿಯೂ ಸಚಿವರು ಈ ಅನ್ಯಾಯವನ್ನು ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಸೌಲಭ್ಯಗಳ ಸುನಾಮಿ ಬರಲಿದೆ ಎಂದು ಲೋಕಸಭಾ ಚುನಾವಣೆಯ ಕಾಲದಲ್ಲಿ ಬುರುಡೆಬಿಟ್ಟ ರಾಜ್ಯ ದಿಂದ ಆಯ್ಕೆಯಾದ 25 ಸಂಸದರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯ ಬಗ್ಗೆ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ ಎಂದು ಕಿಡಿಕಾರಿದ್ದಾರೆ.

ತಮ್ಮನ್ನು ರಾಜ್ಯದ ಹುಲಿ-ಸಿಂಹಗಳೆಂದು ವಂದಿ-ಮಾಗದರಿಂದ ಘೋಷಣೆ ಕೂಗಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಬಿಎಸ್‌ವೈ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವಾಗ ಮಾತ್ರ ಬೆದರಿದ ಇಲಿಯಾಗುತ್ತಾರೆ. ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಡಿಯೂರಪ್ಪ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರ ಗಮನಸೆಳೆದು ಕನ್ನಡಿಗರಿಗೆ ನ್ಯಾಯಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ