ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದಲ್ಲಿ ತಾಂತ್ರಿಕ ಸಹಾಯಕ ಹಾಗೂ ಭದ್ರತಾ ರಕ್ಷಕ ಸಿಬ್ಬಂದಿ ಹುದ್ದೆಗೆ ಶೀಘ್ರ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಕಟ್ ಆಫ್ ಲಿಸ್ಟ್ ಬಿಡುಗಡೆ ಮಾಡುವಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಭೇಟಿ ಮಾಡಿ ಅಭ್ಯರ್ಥಿಗಳು ಮನವಿ ಸಲ್ಲಿಸಿದರು.
ಬುಧವಾರ ಬೆಂಗಳೂರಿನ ಸಚಿವರ ಕಚೇರಿಯಲ್ಲಿ ಅಭ್ಯರ್ಥಿಗಳ ಮನವಿ ಸ್ವೀಕರಿಸಿದ ಸಚಿವ ಶ್ರೀರಾಮುಲು ಅವರು, ಇದೇ ಅಕ್ಟೋಬರ್ 30ರಂದು ಸಾರಿಗೆ ನಿಗಮದ ಪದಾಧಿಕಾರಿಗಳು, ಎಂಡಿ ಸೇರಿದಂತೆ ಉನ್ನತ ಅಧಿಕಾರಿಗಳ ಜತೆ ಬೋರ್ಡ್ ಮೀಟಿಂಗ್ ಇದೆ. ಅಂದು ಈ ಎಲ್ಲವನ್ನು ಚರ್ಚಸಿದ ಬಳಿಕ ಅಂತಿಮಾ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಾರಿಗೆ ನಿಗಮದಲ್ಲಿ ತಾಂತ್ರಿಕ ಸಹಾಯಕ ಹಾಗೂ ಭದ್ರತಾ ರಕ್ಷಕ ಸಿಬ್ಬಂದಿ ಹುದ್ದೆಗೆ 2018 ಮಾರ್ಚ್‌ನಲ್ಲಿ ಅರ್ಜಿ ಆಹ್ವಾನಿಸಿ 2020 ಫೆಬ್ರವರಿ 2ರಂದು ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ ಈ ವರೆಗೂ ಕಟ್ ಆಫ್ ಲಿಸ್ಟ್ ಬಿಡುಗೆ ಮಾಡದೆ ನಿಗಮವು ಕೊರೊನಾ ಕಾರಣ ಹೇಳಿಕೊಂಡು ಬರುತ್ತಿರುವುದರಿಂದ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳು ಗೊಂದಲದಲ್ಲಿ ಸಿಲುಕಿದ್ದಾರೆ.
ಮಾರ್ಚ್ 2018ರಲ್ಲಿ ಸಂಸ್ಥೆಯಲ್ಲಿ ಖಾಲಿ ಇರುವ 726 ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿ ಸಂಬಂಧ ಆನ್‌ಲೈನ್ ಮೂಲಕ 29,479 ಮಂದಿ ಅರ್ಜಿ ಸಲ್ಲಿಸಿದ್ದು, ನಿಗಮವು 2020 ಫೆಬ್ರವರಿ 2ರಂದು ಪರೀಕ್ಷೆಯನ್ನು ನಡೆಸಿದೆ.
ಜತೆಗೆ 2020 ಫೆಬ್ರವರಿ 3 ರಂದು ಪರೀಕ್ಷೆಯ ಕೀ ಉತ್ತರವನ್ನು ಬಿಡುಗಡೆ ಮಾಡಿದೆ. ಆದರೆ 2018 ಮಾರ್ಚ್‌ನಲ್ಲಿ ಅರ್ಜಿ ಪಡೆದಾಗಿನಿಂದ ಈವರೆಗೂ ಅಂದರೆ ಸುಮಾರು ಮೂರೂವರೆ ವರ್ಷ ಕಳೆಯುತ್ತ ಬಂದರೂ ಸಂಬಂಧಿಸಿದ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ. ಜತೆಗೆ ವಯೋಮಿತಿ ಮೀರುತ್ತಿದ್ದು, ಕಟ್ ಆಫ್ ಲಿಸ್ಟ್ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.
ಸಂಸ್ಥೆಯಲ್ಲಿ ಖಾಲಿ ಇರುವ 200 ಭದ್ರತಾ ರಕ್ಷಕ ಸಿಬ್ಬಂದಿ ಹುದ್ದೆಗೆ 20,114 ಮಂದಿ ಅರ್ಜಿ ಸಲ್ಲಿಸಿದ್ದು ಇವರಿಂದಲೂ ಅರ್ಜಿ ಶುಲ್ಕವನ್ನು ಪಡೆದಿರುವ ನಿಗಮವು ಇಲ್ಲೂ ಕೋಟ್ಯಂತರ ರೂ.ಗಳನ್ನು ಪಡೆದಿದ್ದರೂ ಅರ್ಹರಿಗೆ ಹುದ್ದೆ ಕೊಡುವಲ್ಲಿ ಮೀನಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು ಕೊರೊನಾ ನೆಪ ಹೇಳಿಕೊಂಡು ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳವ ಬದಲಿಗೆ ಪುತ್ತೂರು ವಿಭಾಗದ ತಾಂತ್ರಿಕ ವಿಭಾಗದಲ್ಲಿ ಅಪ್ರೆಂಟಿಸ್ ಅಭ್ಯರ್ಥಿಗಳನ್ನು ತೆಗೆದುಕೊಂಡಿದ್ದು, ಈ ಮೂಲಕ ನಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸಚಿವರ ಮುಂದೆ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಇನ್ನಾದರೂ ಸಂಸ್ಥೆಯು ಕಾನೂನು ಬದ್ಧವಾಗಿ ತಾಂತ್ರಿಕ ಸಹಾಯಕ ಹಾಗೂ ಭದ್ರತಾ ರಕ್ಷಕ ಸಿಬ್ಬಂದಿ ಹುದ್ದೆಗೆ ನೇಮಕ ಮಾಡಿಕೊಳ್ಳಲು ಕಟ್ ಆಪ್ ಲಿಸ್ಟ್ ಬಿಡುಗಡೆ ಮಾಡಬೇಕು. ಈ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿವರಿಗೆ ಮನವಿ ಸಲ್ಲಿಸುವ ವೇಳೆ ಅಭ್ಯರ್ಥಿಗಳಾದ ಯಾಸೀನ್, ಸಚಿನ್, ಅಬ್ದುಲ್, ನಾಗೇಂದ್ರ, ನಾಗರಾಜ್, ಜನಾರ್ದನ್, ವೆಂಕಟೇಶ್, ನವೀನ್, ಆದಿಕೇಶವ್, ಮುಜಾಯಿದ್ ಮತ್ತಿತರರು ಇದ್ದರು.