ಚಿತ್ರದುರ್ಗ: ಅರಮನೆ, ಸ್ಮಶಾನದಲ್ಲಿ ಸೈ ಎನಿಸಿಕೊಂಡ ಸತ್ಯ ಹರಿಶ್ಚಂದ್ರನಂತೆ ನಾನೂ ಕೆಲಸ ಮಾಡುತ್ತೇನೆ ಎಂದ ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ವಿಚಾರದಲ್ಲಿ ನನಗೆ ಸಮಾಧಾನವೂ ಇಲ್ಲ, ಅಸಮಾಧಾನವೂ ಇಲ್ಲ. ಆ ಖಾತೆ, ಈ ಖಾತೆ ಪ್ರಶ್ನೆ ಇಲ್ಲ. ಸರ್ಕಾರದಲ್ಲಿ ಕೆಲಸ ಮಾಡುವ ಸಮಾಧಾನ ಇದೆ ಎಂದರು.
ಇನ್ನು ಸತ್ಯ ಹರಿಶ್ಚಂದ್ರ ಅರಮನೆಯಲ್ಲಿ, ಸ್ಮಶಾನದಲ್ಲಿ ಎರಡರಲ್ಲೂ ಹೇಗೆ ಸೈ ಎನಿಸಿಕೊಂಡಿದ್ದನೋ ಹಾಗೆ, ನಾನು ಸತ್ಯ ಹರಿಶ್ಚಂದ್ರನಂತೆ ಕಾಯಾ, ವಾಚ, ಮನಸ್ಸಿನಿಂದ ಕೆಲಸ ಮಾಡುತ್ತಾ ಬಂದಿದ್ದೇವೆ. ಅಲ್ಲಿಯೂ ಸೈ ಎನಿಸಿಕೊಂಡಿದ್ದೇನೆ. ಇಲ್ಲಿಯೂ ಕೆಲಸ ಮಾಡಿ ಸೈ ಎನಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಸಂಭವನೀಯ ಕೊರೊನಾ 3ನೇ ಅಲೆ ಹೇಗೆ ನಿಭಾಯಿಸಬೇಕು ಎಂದು ಶಾಸಕರು, ಅಧಿಕಾರಿಗಳ ಜತೆ ಸಭೆ ಮಾಡುತ್ತಿದ್ದೇನೆ. ನೆರೆ ವಿಚಾರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳೋ ಕುರಿತು ಸಿಎಂ ಸೂಚನೆ ನೀಡಿದ್ದಾರೆ. ಅವರ ಸೂಚನೆಯಂತೆ ಇಂದು ಜಿಲ್ಲೆಗೆ ಬಂದಿದ್ದೇನೆ. ಜನ ಜಾನುವಾರು ರಕ್ಷಣೆಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಸಾರಿಗೆ ಇಲಾಖೆಯಲ್ಲಿ ಕೆಲವೊಂದು ಸವಾಲುಗಳು ಇವೆ. ಸಾರಿಗೆ ಇಲಾಖೆ ತುಂಬಾ ನಷ್ಟದಲ್ಲಿ ಇದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಇಲಾಖೆ ಕುರಿತು ಪರೋಕ್ಷವಾಗಿ ಅವರು ಅಸಮಾಧಾನ ಹೊರ ಹಾಕಿದ್ದಾರೆ.
ರಾಜಕೀಯ ಜೀವನದಲ್ಲಿ ಬಹಳ ಸವಾಲುಗಳು ಬಂದಿವೆ. ಇದನ್ನ ಕೂಡಾ ಸವಾಲಾಗಿ ಸ್ವೀಕರಿಸಿ ಮುಂದೆ ಇಲಾಖೆಯನ್ನು ಲಾಭದಾಯಕವಾಗಿ ಮಾಡುತ್ತೇನೆ. ರಾಜಕಾರಣದಲ್ಲಿ ಯಾವುದೇ ಸವಾಲು ಬಂದರೂ ಸ್ವೀಕರಿಸುವೆ. ನಮಗೆ ಪಕ್ಷ ಮುಖ್ಯ. ನಮ್ಮ ನಾಯಕರಾದ ಪ್ರಧಾನಿ ಮೋದಿ ಜೊತೆಗೆ ಕೆಲಸ ಮಾಡುವುದು ಸಮಾಧಾನ ಇದೆ ಎಂದು ಬಿ ಶ್ರೀರಾಮುಲು ಹೇಳಿದ್ದಾರೆ.
ಇನ್ನು, ಬಸ್ ಟಿಕೆಟ್ ದರ ಹೇರಿಕೆ ಕುರಿತು ಪ್ರತಿಕ್ರಿಯಿಸಿ, ಸಾರಿಗೆ ಇಲಾಖೆಯಿಂದ ಜನರಿಗೆ ಯಾವುದೇ ಹೊರೆಯಾಗದಂತೆ ನೋಡುವೆ. ಮಂಗಳವಾರ ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ. ಯಾವುದೇ ರೀತಿಯಲ್ಲಿ ಸಾರಿಗೆ ಇಲಾಖೆಯಿಂದ ಜನರಿಗೆ ತೊಂದರೆ ಮಾಡಲ್ಲ ಎಂದು ಹೇಳಿದ ಅವರು, ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.