ಶಿವಮೊಗ್ಗ: ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಭಗ್ನ ಪ್ರೇಮಿಯೊಬ್ಬ ಪ್ರಿಯತಮೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ನೇರಲಗಿ ಬಳಿ ನಡೆದಿದೆ.
ಕವಿತಾ (21) ಕೊಲೆಯಾದ ಯುವತಿ . ಶಿವಮೂರ್ತಿ (21) ಆತ್ಮಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿ.
ಇನ್ನು ಪ್ರೇಯಸಿ ಕೊಂದು ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ ಶಿವಮೂರ್ತಿ ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಹೊಸನಗರ ತಾಲೂಕಿನ ನೇರಲಗಿ ಗ್ರಾಮದ ಕವಿತಾ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಹೊಸನಗರ ತಾಲೂಕಿನ ಕಗಲಿ ಗ್ರಾಮದ ಶಿವಮೂರ್ತಿ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ.
ಕೊಲೆಯಾದ ಕವಿತಾ ಹಾಗೂ ಕೊಲೆಗೈದ ಆರೋಪಿ ಶಿವಮೂರ್ತಿ ಇಬ್ಬರೂ 7 ವರ್ಷದಿಂದ ಪ್ರೀತಿಸುತ್ತಿದ್ದರು. ಇತ್ತೀಚಿಗೆ ಕವಿತಾ, ಶಿವಮೂರ್ತಿ ಜೊತೆಗಿನ ಪ್ರೀತಿ ತೊರೆದು ಭದ್ರಾವತಿ ಮೂಲದ ಅಂಬುಲೆನ್ಸ್ ಚಾಲಕನ ಪ್ರೇಮ ಪಾಶಕ್ಕೆ ಸಿಲುಕಿದ್ದಳು.
ಅಂಬುಲೆನ್ಸ್ ಚಾಲಕನ ಜೊತೆ ಕವಿತಾಗೆ ಪ್ರೇಮಾಂಕುರವಾಗುತ್ತಿದ್ದಂತೆ ಶಿವಮೂರ್ತಿಯನ್ನು ದೂರ ಮಾಡ ತೊಡಗಿದ್ದಳು. ಇದರಿಂದ ರೊಚ್ಚಿಗೆದ್ದ ಭಗ್ನಪ್ರೇಮಿ ಶಿವಮೂರ್ತಿ, ಬುಧವಾರ ಮಧ್ಯಾಹ್ನ ಕವಿತಾಳನ್ನು ನಿನ್ನ ಜೊತೆ ಮಾತನಾಡಬೇಕು ಎಂದು ನೇರಲಗಿ ಬಳಿ ಕರೆಯಿಸಿದ್ದಾನೆ.
ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಮೊದಲೇ ಪ್ರಿಯತಮೆಯನ್ನು ಕೊಲೆಗೈದು, ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಶಿವಮೂರ್ತಿ ನಿರ್ಧರಿಸಿದ್ದ. ಅದರಂತೆ ಪ್ರಿಯತಮೆಯನ್ನು ಕೊಲೆಮಾಡಿ, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಇನ್ನು ಕವಿತಾಳನ್ನು ತಾನೇ ಕೊಲೆ ಮಾಡಿದ್ದು ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಘಟನೆ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.