ಬೆಂಗಳೂರು: ಸಾರಿಗೆ ಸಚಿವರು ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ನವೆಂಬರ್ 2ರಂದು ಸಭೆ ಕರೆಯಲಾಗುವುದು ಎಂದು ಕಳೆದ ಅ.28ರಂದು ತಮ್ಮ ಆಪ್ತ ಕಾರ್ಯದರ್ಶಿ ರಾಘವೇಂದ್ರ ಅವರ ಮೂಲಕ ಹೇಳಿಸಿದ್ದರು. ಆದರೆ ನ.2ರಂದು ಸಭೆಯನ್ನು ಕರೆಯದೆ ಸಚಿವರು ತಾವು ನೌಕರರಿಗೆ ಕೊಟ್ಟ ಮಾತಿಗೆ ತಪ್ಪಿ ನಡೆದುಕೊಂಡಿದ್ದಾರೆ.
ಕಳೆದ ಅಕ್ಟೋರ್ 27ರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಸಿಐಟಿಯು ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದರು. ಈ ವೇಳೆ ಧರಣಿಯನ್ನು ವಾಪಸ್ ಪಡೆಯಿರಿ ನ.2ರಂದು ಸಭೆ ಕರೆಯುತ್ತೇವೆ ಅಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಅವರ ಭರವಸೆಯಂತೆ ನೌಕರರು ಧರಣಿ ವಾಪಸ್ ಪಡೆದರು.
ಅದರಂತೆ ನಿನ್ನೆ (ನ.2) ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಸಾರಿಗೆ ನೌಕರರ ಸಂಘಟನೆಗಳ ಸಭೆ ಕರೆದು ಚರ್ಚಿಸಬೇಕಿತ್ತು. ಆದರೆ, ಸಚಿವರು ಬೆಂಗಳೂರಿಗೆ ಬರದೆ ಬಳ್ಳಾರಿಯಲ್ಲೇ ಉಳಿದುಕೊಳ್ಳುವ ಮೂಲಕ ನೌಕರರಿಗೆ ಕೊಟ್ಟ ಮಾತನ್ನು ತಪ್ಪಿದ್ದಾರೆ. ಇದರಿಂದ ಬೆಳಕಿನ ಹಬ್ಬ ದೀಪಾಳಿಯ ಸಮಯದಲ್ಲಾದರೂ ನಮಗೆ ಒಳ್ಳೆ ಸುದ್ದಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ನೌಕರರಿಗೆ ಮತ್ತೆ ನಿರಾಸೆಯಾಗಿದೆ.
ಇನ್ನು ನೌಕರರ ಬಗ್ಗೆ ಅಪಾರ ಕಾಳಜಿ ಹೊಂದಿರುವವರಂತೆ ನಡೆದುಕೊಳ್ಳುತ್ತಿರುವ ಸಚಿವ ಶ್ರೀರಾಮುಲು ಯಾಕೋ ಸಾರಿಗೆ ನೌಕರರ ಬಗ್ಗೆ ತಾತ್ಸಾರ ಭಾವನೆಹೊಂದುತ್ತಿದ್ದಾರೆ ಎನಿಸುತ್ತಿದೆ. ಅಲ್ಲದೆ ಅವರು ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ನೌಕರರ ಬಗ್ಗೆ ಇದ್ದ ಕಾಳಜಿ ಈಗ ಕಾಣುತ್ತಿಲ್ಲ.
ಅಧಿಕಾರಿಗಳು ಸಕಾರಣವಿಲ್ಲದೆ ಅಮಾಯಕ ನೌಕರರಿಗೆ ವಜಾ, ವರ್ಗಾವಣೆ, ಅಮಾನತಿನ ಶಿಕ್ಷೆ ಕೊಟ್ಟಿದ್ದಾರೆ. ಅಧಿಕಾರಿಗಳು ನಡೆದುಕೊಂಡಿರುವುದು ಕಾನೂನಿಗೆ ವಿರೋಧಿಯಾಗಿದೆ ಎಂಬ ಸತ್ಯ ತಿಳಿದಿದ್ದರೂ ಏಕೋ ಅಧಿಕಾರಿಗಳನ್ನು ಶಿಕ್ಷೆಗೊಳಪಡಿಸುವ ಬದಲು ನೌಕರರ ಜುಟ್ಟನೆ ಹಿಡಿದುಕೊಳ್ಳುವ ರೀತಿ ವರ್ತಿಸುತ್ತಿದ್ದಾರೆ. ಇದರಿಂದ ಈಗಾಗಲೇ ಹಲವು ನೌಕರರು ಸಚಿವರ ಮೇಲೆ ಇಟ್ಟಿದ್ದ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ.
ದೀಪಾವಳಿಯ ನಂತರದ ದಿನಗಳಲ್ಲಾದರೂ ಅಧಿಕಾರಿಗಳ ದರ್ಪ ನಿಂತು ನೌಕರರ ಸಮಸ್ಯೆ ನೀಗಲಿ. ಈ ಮೂಲಕ ನೌಕರರ ಜೀವನದಲ್ಲಿ ಹಲವು ವರರ್ಷಗಳಿಂದ ಕವಿದಿರುವ ಕಗ್ಗತ್ತೆಲೆ ದೂರವಾಗಿ ಬೆಳಕಿನ ಹಣತೆ ವಿಜೃಂಭಿಸಲಿ ಎಂದು ಪ್ರಾರ್ಥಿಸೋಣ.
ಇನ್ನು ಅಧಿಕಾರಿಗಳು ಅಮಾಯಕ ನೌಕರರಿಗೆ ಕೊಟ್ಟಿರುವ ವಿವಿಧ ಶಿಕ್ಷೆಗಳನ್ನು ಸಚಿವರು ವಾಪಸ್ ಪಡೆದು ನಾವು ಸಂವಿಧಾನ ಬದ್ಧ ಕಾನೂನಿಗೆ ಗೌರವಕೊಡುತ್ತೇವೆ, ಅನ್ಯಾಯಕ್ಕೆ ಒಳಗಾದ ನೌಕರರಿಗೆ ನ್ಯಾಯ ಕೊಡಲು ಶ್ರಮಿಸುತ್ತೇವೆ ಎಂಬುದನ್ನು ಸಾಬೀತುಪಡಿಸುವ ಸಮಯ ಬಂದಿದೆ. ಈ ಸಮಯದ ಸದುಪಯೋಗ ಪಡೆದು ನೌಕರರ ಪಾಲಿನ ದೇವರಾಗಬೇಕಿದೆ.
ಅ. 28ರಂದು ಸಚಿವರ ಆಪ್ತ ಕಾರ್ಯದರ್ಶಿ ಹೇಳಿದ್ದು: ಸಾರಿಗೆ ಸಚಿವ ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿ ರಾಘವೇಂದ್ರ ಅವರು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬಂದು ನವೆಂಬರ್ 2ರಂದು ಸಚಿವರು ಸಭೆ ಕರೆದು ಒಂದು ತಿಂಗಳೊಳಗೆ ಎಲ್ಲವನ್ನು ಸರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಹೀಗಾಗಿ ನೀವು ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. ಅವರ ಮನವಿಗೆ ಧರಣಿ ನಿರತ ನೌಕರರು ಸ್ಪಂದಿಸಿದರು.
ಒಂದು ವೇಳೆ ನವೆಂಬರ್ 2ರಂದು ನಡೆಯುವ ಸಭೆಯಲ್ಲಿ ನೌಕರರ ಬೇಡಿಕೆಗೆ ತಕ್ಕ ಪ್ರತಿಕ್ರಿಯೆ ಬರದಿದ್ದರೆ ಮತ್ತೆ ಅಹೋರಾತ್ರಿ ಪ್ರತಿಭಟನಾ ಧರಣಿಯನ್ನು ಮುಂದುವರಿಸುವುದಾಗಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಂಜುನಾಥ್ ತಿಳಿಸಿದರು.
ಈ ಹಿಂದೆ ನಡೆದ ಮುಷ್ಕರದ ವೇಳೆ ವಜಾ, ವರ್ಗಾವಣೆ ಮತ್ತು ಅಮಾನತು ಆಗಿರುವ ನೌಕರರನ್ನು ವಾಪಸ್ ಮೂಲ ಸ್ಥಳಕ್ಕೆ ಕರೆಸಿಕೊಳ್ಳಬೇಕು. ಜತೆಗೆ ವಜಾಗೊಂಡಿರುವ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದು, ಅದರಂತೆ ಸಚಿವರು ಎಲ್ಲ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದಾಗಿದ್ದು, ಒಂದು ತಿಂಗಳೊಳಗಾಗಿ ಎಲ್ಲರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿರುವುದಾಗಿ ರಾಘವೇಂದ್ರ ತಿಳಿಸಿದ್ದರು.