ಬೆಂಗಳೂರು: ಅಧಿಕಾರದಾಸೆಗೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಸೇರಿರುವ ಶಾಸಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.
ಅವರು ಬಾಂಬೆಗಾದ್ರೂ ಹೋಗಲಿ, ದೆಹಲಿಗಾದ್ರೂ ಹೋಗಲಿ. ಅವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೊರೊನಾ ಸೋಂಕಿತರ ಸಾವಿನ ಬಗ್ಗೆ ಸರ್ಕಾರ ನೀಡುತ್ತಿರುವ ಅಂಕಿ ಅಂಶಗಳು ಸಂಪೂರ್ಣ ಸುಳ್ಳು. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಮಂದಿ ಸಾವಿಗೀಡಾದಾಗ, ದುರಂತದಲ್ಲಿ ಸತ್ತವರ ಸಂಖ್ಯೆ ಕೇವಲ 4 ಎಂದು ಸುಳ್ಳು ಹೇಳಿತ್ತು. ಸರ್ಕಾರದ ಸುಳ್ಳು ಲೆಕ್ಕಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡು ಇನ್ನೂ ಉರಿಯುತ್ತಿದೆ. ದೆಹಲಿಯಿಂದ ಬಂದ ಪ್ರತಿನಿಧಿಯೂ ಕೈಚೆಲ್ಲಿ ಹಿಂದಿರುಗಿದ್ದಾರೆ. ಈ ಒಳಜಗಳದಿಂದಾಗಿ ಇಡೀ ಸರ್ಕಾರ ಸ್ಥಬ್ದವಾಗಿದೆ. ಈ ವೈಫಲ್ಯದಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಜಗಳ ತಂದು ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.
ಮುಂದಿನ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಮುಖ್ಯ ಗುರಿ. ನಮ್ಮ ಎಲ್ಲ ನಾಯಕರು ಈ ಗುರಿಸಾಧನೆಗೆ ತಮ್ಮದೆ ರೀತಿಯಲ್ಲಿ ಕೆಲಸಮಾಡುತ್ತಿದ್ದಾರೆ. ಎದುರಾಳಿ ಪಕ್ಷಗಳು ನಮ್ಮ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ. ಅವರ ದುರುದ್ದೇಶ ಈಡೇರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರೆಂಬ ಬಗ್ಗೆ ನಮ್ಮ ಪಕ್ಷದ ಕೆಲವು ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯ ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ನಿಲುವಲ್ಲ. ಚುನಾವಣೆಯಲ್ಲಿ ಬಹುಮತ ಬಂದ ನಂತರ ಮುಖ್ಯಮಂತ್ರಿ ಯಾರೆಂದು ಶಾಸಕಾಂಗ ಪಕ್ಷದ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನಿಸಲಿದೆ. ಈಗಲೇ ಮುಖ್ಯಮಂತ್ರಿ ಸ್ಥಾನದ ಬಗೆಗಿನ ಚರ್ಚೆ ಅನವಶ್ಯಕ ಎಂದು ಹೇಳಿದ್ದಾರೆ.