ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ, ಸಿಎಂ ಬಿಎಸ್‌ವೈ ಪುತ್ರ ಬಿ.ವೈ. ವಿಜಯೇಂದ್ರ ಅವರ ಹೆಸರು ಬಳಸಿ ಹಲವರಿಗೆ ಕೆಲಸಕೊಡಿಸುವ ಮತ್ತು ವರ್ಗಾವಣೆ ಮಾಡಿಸುತ್ತೇನೆ ಎಂದು ವಂಚನೆ ಎಸಗಿದ್ದ ಆರೋಪದ ಮೇಲೆ ಗುರುವಾಋ ರಾತ್ರಿ ವಶಕ್ಕೆ ಪಡೆಯಲಾಗಿದ್ದ ಸಚಿವ ಬಿ.ಶ್ರೀರಾಮು ಪಿಎ ರಾಜಣ್ಣ ಅವರನ್ನು ಸಿಸಿಬಿ ಪೊಲೀಸರು ರಾತ್ರಿಯಿಡೀ ವಿಚಾರಣೆ ನಡೆಸಿದರು.
ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಬೆಳಗಿನ ಜಾವ 5ಗಂಟೆಯವರೆಗೂ ಶ್ರೀರಾಮುಲು ಆಪ್ತ ರಾಜಣ್ಣನ ವಿಚಾರಣೆ ನಡೆಯಿತು. ಈ ವೇಳೆ ಹಲವು ಮಾಹಿತಿಯನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದರು. ವಂಚನೆ ಎಸಗಿರುವುದಕ್ಕೆ ಸಾಕ್ಷ್ಯವಾಗಿ ನೀಡಲಾಗಿದ್ದ ಫೋನ್ ಸಂಭಾಷಣೆಯ ತುಣುಕು, ರಾಜಣ್ಣನ ಈಗಿನ ಧ್ವನಿ ಮಾದರಿಯನ್ನು ಪಡೆದ ಸಿಸಿಬಿ ಪೊಲೀಸರು ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
34 ವರ್ಷದ ರಾಜಣ್ಣ ತನ್ನ ಹೆಸರು ಹೇಳಿಕೊಂಡು ಹಲವರಿಗೆ ವಂಚನೆ ಎಸಗಿದ್ದಾರೆಂದು ವಿಜಯೇಂದ್ರ ಅವರೇ ದೂರು ನೀಡಿ ಪ್ರಕರಣ ದಾಖಲಿಸಿದ್ದರು. ಮೂವರ ಜತೆ ಫೋನ್ನಲ್ಲಿ ಮಾತನಾಡಿರುವ ಕುರಿತು ಸಾಕ್ಷ್ಯ, ಟೆಂಡರ್ ಬಿಲ್ ಸ್ಯಾಂಕ್ಷನ್ ಬಗ್ಗೆ ಮಾತನಾಡಿರುವ ಆಡಿಯೋ ಕ್ಲಿಪ್ ಹೀಗೆ ಕೆಲವು ಸಾಕ್ಷ್ಯಗಳನ್ನ ವಿಜಯೇಂದ್ರ ಸಂಗ್ರಹಿಸಿ ಪೊಲೀಸರಿಗೆ ನೀಡಿದ್ದರು.
ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ರಾಜಣ್ಣನ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ಮೊಬೈಲ್‌ನಲ್ಲಿ ರಾಜಣ್ಣ ಸಂಪರ್ಕ ನಡೆಸಿದ ಹಲವರ ಬಗ್ಗೆ ಫೋನ್ ಕರೆ, ವಾಟ್ಸಪ್ ಚಾಟಿಂಗ್ ಸೇರಿ ಹಲವು ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ರಾಜಣ್ಣನ ಸಂಪರ್ಕದಲ್ಲಿದ್ದ ಕೆಲವರು ತಮ್ಮ ಬಗ್ಗೆ ಉಲ್ಲೇಖ ಮಾಡದಂತೆ ಸಿಸಿಬಿ ಪೊಲೀಸರಿಗೆ ಮನವಿ ಮಾಡಿಕೊಂಡಿರುವುದು ತಿಳಿದುಬಂದಿದೆ.
ಶ್ರೀರಾಮುಲು ಬೇಸರ
ಈ ಪ್ರಕರಣದ ಒಟ್ಟಾರೆ ಬೆಳವಣಿಗೆ ಬಗ್ಗೆ ಸಚಿವ ಶ್ರೀರಾಮುಲು ಬೇಸರಗೊಂಡಿದ್ದಾರೆ ಎನ್ನಲಾಗಿದೆ. ರಾಜು ತನಗೆ ಗೊತ್ತಿರುವ ಹುಡುಗನಾಗಿದ್ದಾನೆ. ಮೊದಲೇ ನನ್ನ ಗಮನಕ್ಕೆ ತಂದಿದ್ದರೆ ರಾಜುವನ್ನು ಕೂರಿಸಿ ವಿಚಾರಿಸುತ್ತಿದ್ದೆ. ಈ ಪ್ರಕಣದಲ್ಲಿ ಏನಾಗಿದೆ ಅಂತ ನನಗೆ ಗೊತ್ತಿಲ್ಲ ಎಂದು ತಮ್ಮ ಆಪ್ತರ ಜತೆ ಶ್ರೀರಾಮುಲು ಹೇಳಿಕೊಂಡು ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ರಾಜು ಅಧಿಕೃತವಾಗಿ ನನ್ನ ಬಳಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಪ್ಪಿತಸ್ಥರನ್ನು ಕಾಪಾಡುವ ವ್ಯಕ್ತಿ ನಾನಲ್ಲ. ತನಿಖೆ ಆಗಿ ನಂತರ ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ. ಈಗ ತನಿಖೆ ನಡೆಯುವ ಸಮಯದಲ್ಲಿ ನಾನು ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಸುದ್ದಿಗಾರರಿಗೆ ಶ್ರೀರಾಮುಲು ತಿಳಿಸಿದರು.
ಇನ್ನು, ಇವತ್ತು ವಿಧಾನಸೌಧದಲ್ಲಿ ಸಿಎಂ ಕಚೇರಿ ಮುಂದೆ ಬಂದರೂ ಶ್ರೀರಾಮುಲು ಅತ್ತ ತಿರುಗಿ ನೋಡದೇ ಹೋಗಿದ್ದು, ತೀವ್ರ ಕುತೂಹಲ ಮೂಡಿಸಿತು. ಸಿಎಂ ಕೊಠಡಿಯ ಮುಂದೆಯೇ ಹಾದು ಹೋಗಿ ತಮ್ಮ ಕೊಠಡಿ ಸೇರಿದರು. ಆದರೆ, ಸಿಎಂ ಭೇಟಿ ಮಾಡುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ, ರೀ ಇವಾಗ ಪರಿಷತ್ ಸಭೆ ಇದೆ ಎಂದು ಕೆರಳಿ ಕೆಂಡವಾದರು.