ಬೆಂಗಳೂರು: ಭಾರತದಲ್ಲಿ ಕೊರೊನಾ ಲಸಿಕೆಯ 100 ಕೋಟಿ ಡೋಸ್ ವಿತರಿಸಿದ ಕೇಂದ್ರ ಸರ್ಕಾರ ಅವಸರದಲ್ಲಿ ಸಂಭ್ರಮಾಚರಣೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸರಣಿ ಟ್ವೀಟ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವೈಖರಿಯನ್ನು ಪ್ರಶ್ನಿಸಿದ್ದಾರೆ. ದೇಶದ 139 ಕೋಟಿ ಜನರಲ್ಲಿ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಕೊರೊನಾ ಲಸಿಕೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ, ಅತ್ಯವಸರದಿಂದ 100 ಕೋಟಿ ಲಸಿಕೆ ನೀಡಿಕೆಯ ಸಂಭ್ರಮಾಚರಣೆಯ ಖಾಲಿ ತಟ್ಟೆ ಬಡಿಯುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ದೇಶದಲ್ಲಿ ಇಲ್ಲಿಯ ವರೆಗೆ 29 ಕೋಟಿ ಜನರಿಗೆ ಎರಡು ಡೋಸ್ ಮತ್ತು 42 ಕೋಟಿ ಜನರಿಗೆ ಒಂದು ಡೋಸ್ ಲಸಿಕೆ ಮಾತ್ರ ನೀಡಲಾಗಿದೆ. 139 ಕೋಟಿ ಜನರಲ್ಲಿ 68 ಕೋಟಿ ಜನರಿಗೆ ಇನ್ನು ಒಂದು ಡೋಸ್ ಲಸಿಕೆ ಕೂಡಾ ನೀಡಿಲ್ಲ. ಯಾವ ಸಾಧನೆಗೆ ಸಂಭ್ರಮಾಚರಣೆ? ಎಂದು ಪ್ರಶ್ನೆ ಮಾಡಿದ್ದಾರೆ.
ಭಾರತದಲ್ಲಿ “ಘೋಷಿತ ಗುರಿಯಂತೆ ದೇಶದ 103 ಕೋಟಿ ವಯಸ್ಕರಿಗೆ ಡಿಸೆಂಬರ್ 31ರೊಳಗೆ 2 ಡೋಸ್ ನೀಡಲು 206 ಕೋಟಿ ಲಸಿಕೆ ಬೇಕಾಗಿದೆ. ಕೊಟ್ಟಿರುವುದು 100 ಕೋಟಿ ಮಾತ್ರ. ಗುರಿ ತಲುಪಲು ಪ್ರತಿದಿನ 1.51 ಕೋಟಿ ಲಸಿಕೆ ನೀಡಬೇಕಾಗಿದೆ ಇದಕ್ಕಾಗಿ ಬೇಕಾಗಿರುವುದು ಸಿದ್ದತೆ, ಖಾಲಿ ತಟ್ಟೆಯ ಪ್ರಚಾರ ಅಲ್ಲ.
ಸುಳ್ಳು ಸಾಧನೆಗಳ ಖಾಲಿ ತಟ್ಟೆ ಬಡಿಯುತ್ತಾ ದೇಶದ ಜನರನ್ನು ಮರುಳು ಮಾಡುತ್ತಾ ಬಂದ ನರೇಂದ್ರ ಮೋದಿ ಅವರೇ? ಮೊದಲು ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಎರಡು ಡೋಸ್ ಲಸಿಕೆ ನೀಡಲು ಗಂಭೀರವಾಗಿ ಸರ್ಕಾರವನ್ನು ತೊಡಗಿಸಿಕೊಳ್ಳಿ. ಸಾಧನೆಯ ಸಂಭ್ರಮಾಚರಣೆ ಆ ಮೇಲೆ ಮಾಡೋಣ,” ಎಂದು ಸಿದ್ದರಾಮಯ್ಯ ಕಾಲೆಳೆದಿದ್ದಾರೆ.
ಅಮೆರಿಕ ಶೇ.56ರಷ್ಟು ಹಾಗೂ ಚೀನಾ ಶೇ.70ರಷ್ಟು ಜನಸಂಖ್ಯೆಗೆ ಎರಡು ಡೋಸ್ ಕೊರೊನಾ ಲಸಿಕೆ ನೀಡಿ ಬೂಸ್ಟರ್ ಲಸಿಕೆ ನೀಡುವ ಸಿದ್ದತೆಯಲ್ಲಿದೆ. ಭಾರತದಲ್ಲಿ ಕೇವಲ ಶೇ.21ರಷ್ಟು ಜನಸಂಖ್ಯೆಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಲಾಗಿದೆ. ಯಾವ ಸಾಧನೆಗೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ? ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ: ಶುಕ್ರವಾರ ದೇಶವನ್ನು ಉದ್ದೇಸಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, 130 ಕೋಟಿ ಜನರಿಗೆ ಕೊವಿಡ್-19 ಲಸಿಕೆಯ ವಿತರಣೆ ಹೇಗೆ ಸಾಧ್ಯ ಎಂಬುವವರ ಪ್ರಶ್ನೆಗೆ ಭಾರತೀಯರು ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು. ಕೊರೊನಾ ವಿರುದ್ಧದ ಭಾರತೀಯರ ಹೋರಾಟ ಯಶಸ್ವಿಯಾಗಿದೆ ಎಂದ ಪ್ರಧಾನಿ ಮೋದಿ ಪ್ರತಿಯೊಬ್ಬ ಭಾರತೀಯರನ್ನು ಅಭಿನಂದಿಸಿದರು.
100 ಕೋಟಿ ಡೋಸ್ ಲಸಿಕೆ ವಿತರಣೆ ಮಾಹಿತಿ: ಭಾರತದಲ್ಲಿ ಕೊವಿಡ್-19 ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಿ 9 ತಿಂಗಳಿನಲ್ಲಿ 100 ಕೋಟಿ ಡೋಸ್ ಲಸಿಕೆಯನ್ನು ವಿತರಿಸುವ ಮೂಲಕ ಜಗತ್ತಿನಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿದ ಎರಡನೇ ರಾಷ್ಟ್ರವಾಗಿ ಗುರುತಿಸಿಕೊಂಡಿದೆ.
ಅಕ್ಟೋಬರ್ 21ರ ರಾತ್ರಿ 7 ಗಂಟೆ ವೇಳೆಗೆ 1,00,53,63,691 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 70,91,10,871 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ವಿತರಿಸಿದ್ದರೆ, 29,62,52,820 ಮಂದಿಗೆ ಎರಡನೂ ಡೋಸ್ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ.
ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದರ ನಂತರ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳು ಅತಿಹೆಚ್ಚು ಲಸಿಕೆ ವಿತರಿಸಿದ ದೇಶದ ಟಾಪ್-5 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.