ಬೆಂಗಳೂರು: ಸಾರಿಗೆ ನೌಕರರ ಬಹುಮುಖ್ಯ ಬೇಡಿಕೆಯಾಗಿರುವ ಸಾರಿಗೆ ನೌಕರರಿಗೂ 6ನೇ ವೇತನ ಆಯೋಗದ ಶಿಫಾರಸು ಅಳವಡಿಸಿ ಎಂಬ ನೌಕರರ ಕೂಗಿಗೆ ಸರ್ಕಾರ ಸ್ಪಂದಿಸಿದಂತೆ ಕಾಣುತ್ತಿದೆ.
ಹೌದು! ನಮಗೂ ಸಮಾನ ಕೆಲಸಕ್ಕೆ ಸಮಾನ ವೇತನಕೊಡಿ ಎಂದು ಡಿಸೆಂಬರ್- 2020 ಮತ್ತು ಏಪ್ರಿಲ್ -2021ರಲ್ಲಿ ಸಾರಿಗೆ ನೌಕರರು ಇತಿಹಾಸದಲ್ಲಿ ಉಳಿಯುವಂತಹ ಹೋರಾಟವನ್ನೇ ಮಾಡಿದ್ದರು. ಆದರೆ ಕೊರೊನಾ ಮಹಾಮಾರಿ ಮತ್ತು ಸರ್ಕಾರದ ಇಚ್ಛಾಸಕ್ತಿಯ ಕೊರತೆಯಿಂದ ಅಂದು ನೌಕರರ ಬೇಡಿಕೆಗಳು ಮೂಲೆಗುಂಪಾದವು.
ಇನ್ನು ಹೋರಾಟಕ್ಕೆ ಪ್ರತ್ಯಕ್ಷವಾಗಿಯೋ ಇಲ್ಲ ಪರೋಕ್ಷವಾಗಿಯೋ ದುಮುಕಿದರು ಎಂಬ ಕಾರಣಕ್ಕೆ ಸಾವಿರಾರು ಸಾರಿಗೆ ನೌಕರರ ಅನ್ನ, ನೆಮ್ಮದಿಯನ್ನೇ (ವಜಾ, ಅಮಾನತು, ವರ್ಗಾವಣೆ) ಹಿಂದಿನ ಸರ್ಕಾರ ಮತ್ತು ಕೆಲ ಭ್ರಷ್ಟ ಅಧಿಕಾರಿಗಳು ಕಸಿದುಕೊಂಡು ಬಿಟ್ಟಿದ್ದಾರೆ. ಇದರಿಂದ ನೌಕರರ ಒಗ್ಗಟ್ಟನ್ನು ಒಡೆಯಬಹುದು ಎಂಬ ಲೆಕ್ಕಾಚಾರ ನಿಗಮಗಳಲ್ಲಿರುವ ಕೆಲ ಭ್ರಷ್ಟ ಅಧಿಕಾರಿಗಳದ್ದಾಗಿತ್ತು.
ಆದರೆ, ನೌಕರರು ಹಸಿದುಕೊಂಡು ಮಲಗುತ್ತಿರುವುದಕ್ಕೆ ಇದೇ ನಿಗಮಗಳಲ್ಲಿ ಮಮ್ಮಲ ಮರಗುತ್ತಿರುವ ಅಧಿಕಾರಿಗಳು ಇದ್ದಾರೆ (ನಾವು ಕಚೇರಿಯಲ್ಲಿ ಎಸಿ/ ಫ್ಯಾನ್ ಕೆಳಗೆ ಕುಳಿತು ಕೆಲಸ ಮಾಡುತ್ತಿದ್ದೇವೆ ಎಂದರೆ ಅದು ನೌಕರರ ಬೆವರಿನ ಫಲ ಎಂದು ಕೊಂಡಿರುವ ಮತ್ತು ನೌಕರರ ಬಗ್ಗೆ ಕಾಳಜಿಯುಳ್ಳ ಅಧಿಕಾರಿಗಳು).
ಇಲ್ಲ ಹಸಿದ ಹೊಟ್ಟೆಯಲ್ಲಿ ನೌಕರರು ಮಲಗಿದರೆ ನಮಗೆ ತಿಂದ ಅನ್ನ ಜೀರ್ಣವಾಗುವುದೆ ಎಂಬ ಯೋಚನೆಯಲ್ಲೂ ಆ ಅಧಿಕಾರಿಗಳ ಕಣ್ಣಾಲೆಗಳು ನಿತ್ಯ ತೇವವಾಗುತ್ತಿವೆ. ಆದರೆ ಅದಾವುದನ್ನು ತೋರಿಸಿ ಕೊಳ್ಳದೆ ಅವರು ಇತರ ಅಧಿಕಾರಿಗಳಂತೆ ಕಚೇರಿಗೆ ಬಂದು ಹೋಗುತ್ತಿದ್ದಾರೆ.
ನೌಕರರ ಹಸಿವಿನ ಕೂಗು, ಒಣಗಿದ ಗಂಟಲಿನಿಂದ ಬಾರದ ಧ್ವನಿ ಮತ್ತು ಇಂಥ ನೌಕರರ ಪರವಾದ ಪ್ರಾಮಾಣಿಕ ಅಧಿಕಾರಿಗಳ ಕಣ್ಣೀರನ ಹನಿಗಳು ಸರ್ಕಾರದ ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಮತ್ತು ಉನ್ನತ ಅಧಿಕಾರಿಗಳ ಒಳಮನಸ್ಸಿಗೆ ತಾಕಿವೆಯೋ ಏನೋ ಗೊತ್ತಿಲ್ಲ.
ನೌಕರರು ಅನುಭವಿಸುತ್ತಿರುವ ಕಷ್ಟಗಳನ್ನು ನಿತ್ಯ ಕಣ್ಣಾರೆ ಕಾಣುತ್ತಿರುವ ಸಿಎಂ ಮತ್ತು ಸಾರಿಗೆ ಸಚಿವರು ಹಾಗೂ ಅಧಿಕಾರಿಗಳು ನೌಕರರಿಗೆ ಒಂದು ಒಳ್ಳೆಯದಾಗುವ ತೀರ್ಮಾನಕ್ಕೆ ಈಗ ಬಂದಿದ್ದಾರೆ ಎಂದು ನಂಬುವಂತಹ ಬೆಳೆವಣಿಗೆ ಇಂದು ಅಧಿಕಾರಿಗಳಿಗೆ ಸರ್ಕಾರ ಕಳುಹಿಸಿರುವ ಪತ್ರವೇ ನಿದರ್ಶನವಾಗಿದೆ.
ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸು ಕುರಿತ ಸಭೆ ನಾಳೆ: ಸಾರಿಗೆ ಸಂಸ್ಥೆಗಳ ಅಧಿಕಾರಿಗಳು, ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸುಗಳನ್ನು ಅಳವಡಿಸುವ ಕುರಿತು ಚರ್ಚಿಸಲು ಸಾರಿಗೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ 26ರಂದು (ಗುರುವಾರ) ಮಧ್ಯಾಹ್ನ 3.30ಕ್ಕೆ ನಿಗಮಗಳ ಅಧಿಕಾರಿಗಳ ಸಭೆ ಕರೆಯಲಾಗಿದೆ.
ಸಭೆಗೆ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೂ ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಸತ್ಯವತಿ ಸೂಚನೆ ನೀಡಿದ್ದಾರೆ.
ಅದರಂತೆ ನಾಳೆ (ಆ.26) ರಂದು ಬಹುಮಹಡಿ ಕಟ್ಟದ ಒಂದನೇ ಮಹಡಿಯ 153ನೇ ಕೊಠಡಿಯಲ್ಲಿ ಈ ಉನ್ನತ ಅಧಿಕಾರಿಗಳ ಸಭೆ ನಡೆಯಲಿದೆ. ಸಭೆಯಲ್ಲಿ ನೊಂದ ನೌಕರರಿಗೆ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ತೀರ್ಮಾನ ತೆಗೆದುಕೊಳ್ಳಲಿ. ಮುಂದಿನ ದಿನಗಳು ನೌಕರರ ಕುಟುಂಬ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂಬುವುದು ನಮ್ಮ ಸದಾಶಯವಾಗಿದೆ.