ಬೆಂಗಳೂರು: ಕಳೆದ ಏಪ್ರಿಲ್‌ನಲ್ಲಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸಿದ ಮುಷ್ಕರದ ವೇಳೆ ಸುಮಾರು 2,109 ಸಾರಿಗೆ ನೌಕರರನ್ನು ವಜಾಗೊಳಿಸಲಾಗಿದ್ದು, ಆ ವಜಾ ಆದೇಶವನ್ನು ವಾಪಸ್ ಪಡೆಯುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತು
ಸಾರಿಗೆ ನೌಕರರ ಪರವಾಗಿ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಸಿಎಂ ಮನೆಗೆ ಭೇಟಿ ನೀಡಿದ ಕೂಟದ ಪದಾಧಿಕಾರಿಗಳು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅಂದಾಜು 2,109 ನೌಕರರನ್ನು ಅಧಿಕಾರಿಗಳು ವಜಾಗೊಳಿಸಿದ್ದಾರೆ.
ಅಲ್ಲದೆ 500ಕ್ಕೂ ಹೆಚ್ಚು ನೌಕರರನ್ನು ದೂರದ ಸ್ಥಳಗಳಿಗೆ ವರ್ಗಾವಣೆ ಮಾಡಿದ್ದಾರೆ. ಹೀಗಾಗಿ ಈ ಆದೇಶವನ್ನು ಹಿಂಪಡೆಯಬೇಕೆಂದು ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿದ ಸಿಎಂ ಶೀಘ್ರದಲ್ಲೇ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
ಇನ್ನು ಈ ಸಂಬಂಧ ವಿಜಯಪಥ ವರದಿಗಾರರೊಂದಿಗೆ ಮಾತನಾತನಾಡಿದ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್, ಡಿಸೆಂಬರ್ ತಿಂಗಳಲ್ಲಿ ತಮ್ಮ ಉಪಸ್ಥಿತಿಯಲ್ಲಿ ಸಾರಿಗೆ ನೌಕರರಿಗೆ ಸರ್ಕಾರವೇ ಕೊಟ್ಟ ಭರವಸೆಯನ್ನು ಈಡೇರಿಸದೆ ಇದ್ದ ಕಾರಣ ಸರ್ಕಾರವನ್ನು ಕೊಟ್ಟ ಭರವಸೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಏಪ್ರಿಲ್ ತಿಂಗಳಿನಲ್ಲಿ ಸಾರಿಗೆ ಮುಷ್ಕರ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆ ಶಿಸ್ತು ಕ್ರಮದ ಹೆಸರಿನಲ್ಲಿ ಹಲವಾರು ನೌಕರರನ್ನು (ಮಹಿಳಾ, ಅಂಗವಿಕಲ ಸಿಬ್ಬಂದಿಗಳು ಎಂದು ಸಹ ನೋಡದೆ) ದೂರದ ಸ್ಥಳಗಳಿಗೆ (ಸುಮಾರು 300 ರಿಂದ 450 ಕಿಲೋಮೀಟರ್) ವರ್ಗಾವಣೆ ಮಾಡಿದ್ದು ನೌಕರರು ಸಂಕಷ್ಟ ಎದುರಿಸುವಂತಾಗಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿದರು.
ಇನ್ನು ಮಹಿಳಾ ಸಿಬ್ಬಂದಿ ಹಾಗೂ ಇತರ ನೌಕರರು ತಮ್ಮ ಕುಟುಂಬವನ್ನು ಬಿಟ್ಟು ದೂರದ ಸ್ಥಳಗಳಲ್ಲಿ ಕೆಲಸ ನಿರ್ವಹಿಸಲು ತುಂಬಾ ಕಷ್ಟವಾಗುತ್ತಿದೆ. ಇದಿಷ್ಟೇ ಸಾಲದು ಎಂಬಂತೆ ಮತ್ತಷ್ಟು ನೌಕರರನ್ನು ಸೇವೆಯಿಂದ ವಜಾ ಮಾಡಿದ್ದು, ಇವರೆಲ್ಲ ತಮ್ಮ ಜೀವನದ ಆದಾಯದ ಮೂಲವನ್ನೇ ಕಳೆದುಕೊಂಡಂತಾಗಿದೆ.
ಅಲ್ಲದೆ ನಿವೃತ್ತಿ ಅಂಚಿನಲ್ಲಿರುವ ನೌಕರರು ಒಳಗೊಂಡಂತೆ ಸಾವಿರಾರು ನೌಕರರನ್ನು ವಜಾ ಮಾಡಿದ್ದಾರೆ. ಇದರಿಂದ ನಾಲ್ಕು ತಿಂಗಳಿಂದ ವೇತನವಿಲ್ಲದೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.
ನೌಕರರು ಅಧಿಕಾರಿಗಳ ನಡೆಯಿಂದ ಬೇಸತ್ತಿದ್ದು, ಜೀವನವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಅಧಿಕಾರಿಗಳು ಕ್ಷುಲ್ಲಕ ಕಾರಣಗಳಿಗೆ ಅಮಾನತು ಮಾಡಿ ಮತ್ತಷ್ಟು ಕಷ್ಟ ನೀಡುತ್ತಿದ್ದಾರೆ. ಈಗ ಮುಷ್ಕರದ ಸಮಯದಲ್ಲಿ ಕರ್ತವ್ಯಕ್ಕೆ ಬಂದಿಲ್ಲ ಎಂಬ ಕಾರಣ ನೀಡಿ ಕಲಂ -23 ಸೇರಿ ಇತರ ನಿಯಮಗಳಡಿಯಲ್ಲಿ ಆರೋಪ ಪತ್ರಗಳನ್ನು ನೀಡಿ ಗಾಯದ ಮೇಲೆ ಬರೆಎಳೆಯುತ್ತಿದ್ದಾರೆ. ಮುಷ್ಕರದ ಸಮಯದಲ್ಲಿ ರಾಜ್ಯಾದ್ಯಂತ ಅನೇಕ ನೌಕರರ ಮೇಲೆ ಶೇ.95ರಷ್ಟು ಸುಳ್ಳು ಕೇಸ್‌ಗಳನ್ನು ದಾಖಲಿಸಿದ್ದಾರೆ.
ಆದ್ದರಿಂದ ತಾವು ಈ ಕೂಡಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕೂ ನಿಗಮಗಳಲ್ಲಿ ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ, ವರ್ಗಾವಣೆ ಹಾಗೂ ಅಮಾನತು ಪ್ರಕರಣಗಳನ್ನು ರದ್ದುಪಡಿಸಿ ನೌಕರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು, ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಯಗಳಿಗೆ ಮತ್ತೆ ನಿಯೋಜಿಸಿ ಸಾರಿಗೆ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಮೂಲಕ ಸಾರಿಗೆ ನೌಕರರ ಪಾಲಿನ ದೇವರಾಗಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ಚಂದ್ರು ತಿಳಿಸಿದರು.
ಅಲ್ಲದೆ ಈ ಬಗ್ಗೆ ತಾವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಲು ತಮ್ಮ ಅಮೂಲ್ಯವಾದ ಕಾಲಾವಕಾಶವನ್ನು ನಿಗದಿ ಮಾಡಬೇಕೆಂದು ಸಮಸ್ತ ಸಾರಿಗೆ ನೌಕರರ ಪರವಾಗಿ ವಿನಮ್ರತೆಯಿಂದ ವಿನಂತಿಸಿಕೊಂಡಿದ್ದೇವೆ ಅದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮಯ ನಿಗದಿ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂದು ವಿಜಯಪಥಕ್ಕೆ ತಿಳಿಸಿದರು.