ಬೆಂಗಳೂರು: ಕೊರೊನಾ ಸಾಂಕ್ರಮಿಕ ಭೀತಿ ನಡುವೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಆಯೋಜಿಸುವಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಯಶಸ್ವಿಯಾಗಿದೆ. ಆದರೆ, ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಎಸ್.ಸುರೇಶ್ ಕುಮಾರ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.
ಆದರೆ, ಸುರೇಶ್ ಕುಮಾರ್ ಈ ಹಿಂದೆ ಘೋಷಿಸಿದಂತೆ ಆಗಸ್ಟ್ 10ರ ಒಳಗೆ 2020-21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟವಾಗುತ್ತಿದೆ.
ಇಂದು (ಆಗಸ್ಟ್ 9) ಮಧ್ಯಾಹ್ನ 3:30ರ ನಂತರ ಎಸ್‌ಎಸ್‌ಎಲ್‌ಸಿ ಪರೀಕಾ ಫಲಿತಾಂಶ ಘೋಷಿಸಲಾಗುತ್ತದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶೇಷವಾದ ಒಎಂಆರ್ ಉತ್ತರ ಪತ್ರಿಕೆಗಳನ್ನು ಬಳಸಲಾಗಿತ್ತು. ಈ ಒಎಂಆರ್ ಶೀಟ್ ಡಿಜಿಟಲ್ ಸ್ಕ್ಯಾನಿಂಗ್‌ಗೆ ಕಳುಹಿಸಿ ನಂತರ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಾಗುತ್ತಿದೆ.
ನೂತನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಫಲಿತಾಂಶ ಪ್ರಕಟಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕೊರೊನಾ ಆತಂಕದ ನಡುವೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜುಲೈ 19 ಹಾಗೂ 22ರಂದು ಎರಡೇ ದಿನಗಳಲ್ಲಿ ಪರೀಕ್ಷೆಯನ್ನು ನಡೆಸಿತ್ತು. ಒಂದು ದಿನದಲ್ಲಿ ಮೂರು ಪರೀಕ್ಷೆಗಳಂತೆ ಎರಡು ದಿನಗಳಲ್ಲಿ ಆರು ವಿಷಯಗಳ ಪರೀಕ್ಷೆಯನ್ನು ನಡೆಸಲಾಗಿತ್ತು. ಪ್ರತಿ ವಿಷಯಕ್ಕೆ 40 ಅಂಕಗಳ ಪ್ರಶ್ನೆಗಳನ್ನು ನೀಡಲಾಗಿತ್ತು.
ಫಲಿತಾಂಶವನ್ನು ನೋಡುವುದು ಹೇಗೆ?
ಇಂದು ಮಧ್ಯಾಹ್ನ 3:30ರ ವೇಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರಕಟಿಸಲಿದ್ದಾರೆ. ಇದೇ ವೇಳೆಗೆ ಪರೀಕ್ಷಾ ಮಂಡಳಿಯ ಅಧಿಕೃತ ಎರಡು ವೆಬ್‌ಸೈಟ್ ಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿಕೃತ ವೆಬ್‌ಸೈಟ್ http://kseeb.kar.nic.in/ ಗೆ ಭೇಟಿ ನೀಡಿ ಅಲ್ಲಿ ಫಲಿತಾಂಶಗಳನ್ನು ಪರಿಶೀಲನೆ ಮಾಡಬಹುದು.
ವೆಬ್‌ಸೈಟ್‌ನಲ್ಲಿ ತೆರೆದುಕೊಂಡ ಪುಟದಲ್ಲಿ ವಿದ್ಯಾರ್ಥಿಗಳು ರಿಜಿಸ್ಟರ್ ಸಂಖ್ಯೆ ಹಾಗೂ ಜನ್ಮ ದಿನಾಂಕ ಮಾಹಿತಿ ಒದಗಿಸಿ ಕ್ಲಿಕ್ ಮಾಡಿದರೆ ಫಲಿತಾಂಶದ ಮಾಹಿತಿ ದೊರೆಯುತ್ತದೆ.
ಒಟ್ಟು 8.76 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಯಾವುದೇ ಮಕ್ಕಳು ಗೈರು ಆಗದೇ ಶೇ 99.65ರಷ್ಟು ಹಾಜರಾತಿಯೊಂದಿಗೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಕಳೆದ ಬಾರಿಯ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದ ಮಕ್ಕಳಿಗಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಹಾಜರಾಗಿದ್ದಾರೆ. ಮಕ್ಕಳ ಶೇಕಡಾವಾರು ಹಾಜರಾತಿಯೂ ಈ ಬಾರಿ ಹೆಚ್ಚಾಗಿದೆ” ಎಂದು ಶಿಕ್ಷಣ ಮಂಡಳಿ ಮಾಹಿತಿ ನೀಡಿದೆ.
4,885 ಪರೀಕ್ಷಾ ಕೇಂದ್ರ, 73, 064 ಪರೀಕ್ಷಾ ಕೊಠಡಿಯಲ್ಲಿ ಕೊರೊನಾ ಮಾರ್ಗಸೂಚಿಗೆ ಅನುಸಾರವಾಗಿ ಪರೀಕ್ಷೆ ಆಯೋಜನೆ ಮಾಡುವಲ್ಲಿ ಸುಮಾರು 1.19 ಲಕ್ಷ ಸಿಬ್ಬಂದಿ ಶ್ರಮಿಸಿದ್ದರು.