ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಭೀತಿಯಿಂದ ಉದ್ಭವಿಸಿರುವ ಶಾಲಾ ಶುಲ್ಕಗಳ ಗೊಂದಲಗಳಿಗೆ ಅಂತಿಮ ಪರಿಹಾರ ಹಾಗೂ ಇತಿಶ್ರೀ ಹಾಕಲು ಆಮ್ ಆದ್ಮಿ ಪಕ್ಷದ ಮೂರು ಅಂಶಗಳ ಪರಿಹಾರ ಸೂತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಸರ್ಕಾರಕ್ಕೆ ಕೊಟ್ಟಿದ್ದಾರೆ.
ಪಕ್ಷದ ಮಾಧ್ಯಮ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯ ಮೂರು ಅಂಶಗಳ ಒಳಗೊಂಡ ವಿವರಗಳ ಬಿಡುಗಡೆ ಮಾಡಿದರು. ಅವುಗಳಲ್ಲಿ ಮೊದಲನೇ ಸೂತ್ರ….
ರಾಜ್ಯದಲ್ಲಿನ 50 ಸಾವಿರ ರೂ.ಗಳವರೆಗೆ ಶಾಲಾ ಶುಲ್ಕವನ್ನು ಸಂಗ್ರಹಿಸುತ್ತಿರುವ ಬಜೆಟ್ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಗಳಿಗೆ ಸರ್ಕಾರವು ಕನಿಷ್ಠ 15,000 ಸಾವಿರ ರೂ.ಗಳ ಶಿಷ್ಯವೇತನವನ್ನು ನೀಡಬೇಕು ಅಥವಾ ಆ ಶಾಲೆಗಳಲ್ಲಿನ ಶಿಕ್ಷಕರಿಗೆ ಅನುದಾನಿತ ಶಿಕ್ಷಕರ ರೀತಿಯಲ್ಲೇ ವೇತನ ಭತ್ಯೆ ನೀಡಬೇಕು. ರಾಜ್ಯದಲ್ಲಿನ 80 % ಈ ಬಜೆಟ್ ಶಾಲೆಗಳು ಕೊರೊನಾ ಅಲೆಗಳಿಂದಾಗಿ ಹೆಚ್ಚಿನ ನಷ್ಟವನ್ನು ಅನುಭವಿಸಿವೆ.
ಎರಡನೇ ಸೂತ್ರ
ಪ್ರಸ್ತುತ ವಿಶ್ವ ಗುಣಮಟ್ಟದ ನವ ನಾವೀನ್ಯ ತಾಂತ್ರಿಕತೆ ಗಳನ್ನೊಳಗೊಂಡ ಶೈಕ್ಷಣಿಕ ವ್ಯವಸ್ಥೆಗಳನ್ನು ಶಾಲಾ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲು ಬೇಕಾಗಿರುವ ಸ್ಮಾರ್ಟ್ ಫೋನ್ , ಟ್ಯಾಬ್ ಗಳು ಸೇರಿದಂತೆ ಇನ್ನಿತರ ವೈಜ್ಞಾನಿಕ ಉಪಕರಣಗಳ ಬಳಸುವಿಕೆಗಾಗಿ ಬಡ್ಡಿರಹಿತ ಸಾಲದ ವ್ಯವಸ್ಥೆಯನ್ನು ಸರ್ಕಾರವು ರೂಪಿಸಬೇಕು.
ಮೂರನೇ ಸೂತ್ರ
ಪಾಲಕರು, ಶಿಕ್ಷಕರು-ಆಡಳಿತ ಮಂಡಳಿ ಹಾಗೂ ಸ್ಥಳೀಯ ನಾಗರಿಕ ಸಂಘಗಳ ಸದಸ್ಯರನ್ನು ಒಳಗೊಂಡ ಶಾಲಾ ನಿರ್ವಹಣಾ ಸಮಿತಿಯನ್ನು ರಚಿಸಿ ಸಾಂವಿಧಾನಿಕ ಹಕ್ಕನ್ನು ನೀಡಬೇಕು.
ಕರ್ನಾಟಕ ರಾಜ್ಯದಲ್ಲಿ ಈ ಮೂರು ಅಂಶಗಳನ್ನು ಜಾರಿಗೆ ತರಲು ಸರ್ಕಾರವು ನೈತಿಕ ಜವಾಬ್ದಾರಿಯನ್ನು ಮಾತ್ರ ಹೊಂದಿಲ್ಲದೆ ಮೂಲಭೂತ ಶೈಕ್ಷಣಿಕ ಹಕ್ಕುಗಳ ಅಡಿಯಲ್ಲಿ ಕಾನೂನಾತ್ಮಕ ಜವಾಬ್ದಾರಿಯನ್ನು ಸಹ ಹೊಂದಿದೆ. ಕೂಡಲೇ ರಾಜ್ಯ ಸರ್ಕಾರವು ಈ ಪರಿಹಾರ ಸೂತ್ರಗಳನ್ನು ಜಾರಿಗೆ ತರುವ ಮೂಲಕ ಪ್ರಸ್ತುತ ಗೊಂದಲಗಳಿಗೆ ಇತಿಶ್ರೀ ಎಳೆಯಬೇಕೆಂದು ಪೃಥ್ವಿ ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.
ಹತ್ತು ದಿನಗಳಲ್ಲಿ ಸರ್ಕಾರವು ಈ ಮೂರು ಸೂತ್ರಗಳನ್ನು ಜಾರಿಗೆ ತರುವ ಸ್ಪಷ್ಟನೆ ನೀಡಬೇಕಿದೆ. ಇಲ್ಲದಿದ್ದ ಪಕ್ಷದಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯದಾದ್ಯಂತ ಜನಾಂದೋಲನ ರೂಪಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ನೀತಿ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಕಾಶ್ ನೆಡುಂಗಡಿ ಇದ್ದರು.