ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಏಪ್ರಿಲ್ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ವೇಳೆ ನಾಲ್ಕೂ ನಿಗಮಗಳಲ್ಲಿ ಹಲವು ನೌಕರರಿಗೆ ವಜಾ, ಅಮಾನತು ಮತ್ತು ವರ್ಗಾವಣೆಯಂತಹ ಶಿಕ್ಷೆ ನೀಡಿದ್ದು, ಈ ಸಂಬಂಧ ದಾಖಲಾಗಿರುವ ನೌಕರರ ಪ್ರಕರಣದ ವಿಚಾರಣೆ ಹೈ ಕೋರ್ಟ್ ದ್ವಿಸದಸ್ಯ ನ್ಯಾಯಪೀಠದ ಮುಂದೆ ಗುರುವಾರ ನಡೆಯಿತು.
ಹೈ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ.ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ.ಸಚಿನ್ ಶಂಕರ್ ಮಗದುಮ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ವಿಚಾರಣೆ ಕೈಗೆತ್ತಿಕೊಂಡಿತು. ಈ ವೇಳೆ ನೌಕರರ ಪರ ವಕೀಲರಾದ ಅಮೃತೇಶ್ ಅವರು ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ಪ್ರಕರಣ ವಿಚಾರಣೆಯನ್ನು ನವೆಂಬರ್ 8ಕ್ಕೆ ಮುಂದೂಡಿದೆ.
ಕಳೆದ ಆಗಸ್ಟ್ 3ರಂದು ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಿ ಅಂದು ಆಗಸ್ಟ್ 27ಕ್ಕೆ ಮುಂದೂಡಿತ್ತು. ಆದರೆ, ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್. ಓಕಾ ಅವರು ಬಡ್ತಿ ಪಡೆದು ಸುಪ್ರೀಂ ಕೋರ್ಟ್ಗೆ ವರ್ಗಾವಣೆ ಗೊಂಡಿದ್ದರಿಂದ ಆಗಸ್ಟ್ 27ರಂದು ಬದಲಿ ಬೆಂಚ್ನಲ್ಲಿ ಈ ಪ್ರಕರಣದ ವಿಚಾರಣೆ ಬಂದಿತ್ತು. ಹೀಗಾಗಿ ವಿಚಾರಣೆ ಅ.28ಕ್ಕೆ ಮುಂದೂಡಲ್ಪಟ್ಟಿತ್ತು.
ಹೀಗಾಗಿ ನಿನ್ನೆ (ಅ.28) ಪ್ರಕರಣದ ವಿಚಾರಣೆ ಇತ್ತು. ಆದರೆ ನೌಕರರ ಪರ ವಕೀಲರು ಗೈರಾಗಿದ್ದರಿಂದ ವಿಚಾರಣೆಯನ್ನು ಹೈ ಕೋರ್ಟ್ ನ್ಯಾಯಪೀಠ ನವೆಂಬರ್ 8ಕ್ಕೆ ಮುಂದೂಡಿದೆ ಎಂದು ತಿಳಿದು ಬಂದಿದೆ.
ನೌಕರರ ಪರ ವಕಾಲತ್ತು ವಹಿಸಿರುವ ವಕೀಲ ಅಮೃತೇಶ್ ಅವರನ್ನು ಈ ಪ್ರಕರಣ ಸಂಬಂಧ ಮುಂದಾಳತ್ವ ವಹಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪ್ರಮುಖರು ಭೇಟಿ ಮಾಡಿ ಚರ್ಚಿಸದ ಹಿನ್ನೆಲೆಯಲ್ಲಿ ನಿನ್ನೆ ಪ್ರಕರಣದ ವಿಚಾರಣೆಗೆ ಹೋಗದೆ ವಕೀಲರು ಹಿಂದೆ ಸರಿದಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಈ ಹಿಂದೆ ಇದ್ದ ವಕೀಲ ಎಚ್.ಬಿ. ಶಿವರಾಜು ಅವರು ಇದೇ ಕಾರಣವಿದ್ದರೂ ಅದನ್ನು ಬಹಿರಂಗಪಡಿಸದೆ ನಮಗೆ ಬೇರೆಬೇರೆ ಪ್ರಕರಣಗಳ ತುರ್ತು ವಿಚಾರಣೆ ಇರುವುದರಿಂದ ನಾವು ಈ ಪ್ರಕರಣದಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಹೇಳಿ ಎನ್ಓಸಿ ಕೂಡ ಕೊಟ್ಟು ಹೊರನಡೆದಿದ್ದರು.
ಈಗ ಮತ್ತೆ ನೌಕರರ ಪರ ಈ ಪ್ರಕರಣದಲ್ಲಿ ವಕಾಲತ್ತು ವಹಿಸಿಕೊಂಡಿರುವ ಹಾಲಿ ವಕೀಲ ಅಮೃತೇಶ್ ಅವರು ಕೂಡ ಕೆಲವರು ಈ ಪ್ರಕರಣದ ವಿಚಾರಣಗೆ ಸಹಕರಿಸುತ್ತಿಲ್ಲ. ನಾವು ಕೇಳಿದ ಮಾಹಿತಿ ಕೊಡಲು ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲಿದ್ದಾರೆ ಎಂಬ ಗುಸುಗುಸು ನೌಕರರ ಅಂಗಳದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.
ಈ ರೀತಿ ವಕೀಲರನ್ನು ಪದೇಪದೆ ಬದಲಾಯಿಸುತ್ತ ಹೋದರೆ ಮುಂದಿನ ದಿನಗಳಲ್ಲಿ ಅದರಲ್ಲೂ ಪ್ರಮುಖವಾಗಿ ವಜಾ, ಪೊಲೀಸ್ ಪ್ರಕರಣಗಳಡಿ ಸಿಲುಕಿರುವ ನೌಕರರ ಗತಿ ಏನು ಎಂಬ ಆತಂಕ ಈಗ ಶುರುವಾಗುತ್ತಿದೆ. ಅಲ್ಲದೆ ಕೆಲವರು ತಮ್ಮ ಪ್ರತಿಷ್ಠೆಗಾಗಿ ನೌಕರರ ಜೀವನವನ್ನೇ ಬಲಿಕೊಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆಗಳು ಆರಂಭವಾಗಿವೆ.
ಕಳೆದ ಏಳು ತಿಂಗಳುಗಳಿಂದ ವಜಾಗೊಂಡು ಮನೆಯಲ್ಲಿ ಇರುವ ನೌಕರರು ಜೀವನ ನಿರ್ವಾಹಣೆಗಾಗಿ ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಮತ್ತು ಸಿಲುಕುತ್ತಿದ್ದಾರೆ. ಆದರೂ ಈ ಬಗ್ಗೆ ಯೋಚಿಸದೆ ತಮ್ಮ ಪ್ರತಿಷ್ಠೆಗಾಗಿ ನೌಕರರ ಪ್ರಕರಣದ ವಿಚಾರಣೆ ಸಂಬಂಧ ವಕೀಲರನ್ನೇ ಈ ವರೆಗೂ ಭೇಟಿ ಮಾಡಿಲ್ಲ ಎಂದರೆ ಏನರ್ಥ?
ಈ ರೀತಿಯ ಪ್ರತಿಷ್ಠೆಯನ್ನು ಬಿಟ್ಟು ನೌಕರರಿಗೆ ಒಳ್ಳೆಯದನ್ನು ಮಾಡುವ ನಿಟ್ಟಿನಲ್ಲಿ ಹೊಣೆ ಹೊತ್ತವರು ಮುಂದಾಗಬೇಕು. ಈ ಮೂಲಕ ಮುಂದೆ ಆಗುವ ಡ್ಯಾಮೇಜ್ ಅನ್ನು ಈಗಿನಿಂದಲೇ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ, ಈಗಾಗಲೇ ನೌಕರರನ್ನು ರಣಹದ್ದುಗಳಂತೆ ಕಿತ್ತುತಿನ್ನುತ್ತಿರುವ ಕೆಲ ಅಧಿಕಾರಿಗಳಿಗೆ ನಿಮ್ಮ ಈ ನಡೆಯಿಂದ ಆನೆ ಬಲ ಬಂದಂತಾಗಿ ಇನ್ನಷ್ಟು ಕಿರುಕುಳ ಕೊಡಲು ಮುಂದಾಗುತ್ತಾರೆ.
ಹೀಗಾಗಿ ಇಂದಿನಿಂದಲೇ ನಿಮ್ಮ ಒಣಪ್ರತಿಷ್ಠೆಯನ್ನು ಬದಿಗೊತ್ತಿ ನಿಮ್ಮಮೇಲೆ ವಿಶ್ವಾಸ, ನಂಬಿಕೆ ಇಟ್ಟು ಹೋರಾಟಕ್ಕೆ ಇಳಿದೋ ಇಳಿಯದೆಯೋ ಸಮಸ್ಯೆಗೆ ಸಿಲುಕಿರುವ ನೌಕರರನ್ನು ಆ ಸಮಸ್ಯೆಯಿಂದ ಹೊರತರಬೇಕು. ಈ ನಿಟ್ಟಿನಲ್ಲಿ ರೂಪುರೇಷೆ ಹಾಕಿಕೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮಗೂ ಇತರ ಕೆಲ ಸಾರಿಗೆ ಸಂಘಟನೆಗಳ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ನೌಕರರು ಎಚ್ಚರಿಕೆ ನೀಡುತ್ತಿದ್ದಾರೆ.