ಧಾರವಾಡ: ಸರ್ಕಾರ ಮತ್ತು ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳು ನೌಕರರಿಗೆ ಎಸಗುತ್ತಿರುವ ಅನ್ಯಾಯದ ವಿರುದ್ಧ ದೊಡ್ಡಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸಲು ಬೇಕಾದ ಸಲಹೆ ಸೂಚನೆಗಳನ್ನು ನೀಡಲು ಧಾರವಾಡದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಇದೇ ನ.26ರಂದು ಸಭೆ ಕರೆದಿದೆ.
ಅಂದು ಬೆಳಗ್ಗೆ 10 ಗಂಟೆಗೆ ನಗರದ ಕಲಾಭವನ, ಮಾರುತಿ ವ್ಯಾಯಾಮ ಶಾಲೆ ಹತ್ತಿರವಿರುವ ಕೂಟದ ಗೌರವ ಅಧ್ಯಕ್ಷ ಪಿ.ಎಚ್.ನೀರಲಕೇರಿ ಅವರ ನಿವಾಸಲ್ಲಿ ನೀರಲಕೇರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಸಭೆಗೆ ಪ್ರತಿ ಘಟಕದಿಂದ ಕನಿಷ್ಠ 5 ಮಂದಿ ಮುಖಂಡರು (ಹೆಚ್ಚಿನ ಸಂಖ್ಯೆಯಲ್ಲೂ ಭಾಗವಹಿಸಬಹುದು) ಭಾಗವಹಿಸುವ ಮೂಲಕ ತಮ್ಮ ಸಲಹೆ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಸಭೆಯಲ್ಲಿ ಪ್ರಮುಖವಾಗಿ ಸರ್ಕಾರ ಕೊಟ್ಟ ಭರವಸೆಯಂತೆ 6ನೇ ವೇತನ ಆಯೋಗದ ಶಿಫಾರಸನ್ನು ಜಾರಿ ಮಾಡಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಯಾವರೀತಿ ರೂಪುರೇಷೆ ಸಿದ್ದಪಡಿಸಬೇಕು. ಜತೆಗೆ ಏಪ್ರಿಲ್ನಲ್ಲಿ ನಡೆದ ಮುಷ್ಕರದಲ್ಲಿ ಆದಂತ ವಜಾ, ಅಮಾನತು, ವರ್ಗಾವಣೆ, ಸುಳ್ಳು ಪೊಲೀಸ್ ಪ್ರಕರಣಗಳನ್ನು ಹಿಂಪಡೆಯದಿರುವ ಸರ್ಕಾರ ಮತ್ತು ನಿಗಮಗಳಿಗೆ ಹೇಗೆ ಬಿಸಿ ಮುಟ್ಟಿಸಬೇಕು ಎಂಬುದರ ಬಗ್ಗೆ ಚರ್ಚೆಯಾಗಲಿದೆ.
ಇನ್ನು ಡಿಸೆಂಬರ್ 1ರಿಂದ ಹುಬ್ಬಳ್ಳಿ-ಧಾರವಾಡದಿಂದ ಪಾದಯಾತ್ರೆ ಆರಂಭವಾಗಲಿದ್ದು, ಚಳವಳಿಗೆ ಎಲ್ಲಾ ನೌಕರರು ಹಾಗೂ ಕರ್ನಾಟಕ ರಾಜ್ಯದ ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು ಒಟ್ಟಾಗಿ ಸಾರಿಗೆ ನೌಕರರ ಶಾಶ್ವತ ಪರಿಹಾರಕ್ಕೆ ಹೋರಾಟ ಮಾಡಲು ತಯಾರಾಗಿವೆ. ಹೀಗಾಗಿ ಈ ಬಾರಿ ಮಾಡು ಇಲ್ಲವೇ ಮಡಿ ಹೋರಾಟ ಅನಿವಾರ್ಯವಾಗಿದೆ. ಈ ಬಗ್ಗೆ ಅನಿಸಿಕೆಗಳನ್ನು ಸಭೆಯಲ್ಲಿ ಸಂಗ್ರಹಿಸಲಾಗುವುದು ಎಂದು ತಿಳಿದು ಬಂದಿದೆ.
ಇನ್ನು ಪ್ರಮುಖವಾಗಿ ಸಾರಿಗೆಯ ಎಲ್ಲಾ ನೌಕರರು ನಮ್ಮ ಚಳವಳಿಗೆ ಒಗ್ಗಟ್ಟಿನಿಂದ ಬೆಂಬಲ ನೀಡಬೇಕು. ಈ ಹಿಂದೆ ನಡೆದುಕೊಂಡಂತೆ ಆದರೆ ನಾವು ಶಾಶ್ವತವಾಗಿ ಮೇಲೆ ಏಳಲು ಸಾಧ್ಯವಿಲ್ಲ ಎಂಬುದರ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸವು ಆಗಲಿದೆ ಎನ್ನಲಾಗುತ್ತಿದೆ.
ನಿಗಮಗಳಲ್ಲಿ ಇರುವ ಮುಖ್ಯವಾದ ಸಮಸ್ಯೆಗಳಿಗೆ ಶತಾಯಗತಾಯ ಅಂತ್ಯ ಹಾಡಲೇ ಬೇಕು. ಅದಕ್ಕೆ ಎಲ್ಲಾ ನೌಕರರು ಒಗ್ಗಟ್ಟಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕು. ಎತ್ತು ಏರಿಗೆ ಕೋಣ ನೀರಿಗೆ ಎಂಬಂತಾಗಬಾರದು. ಹೀಗಾಗಿ ಎಲ್ಲರೂ ತಮ್ಮ ನಿಲುವನ್ನು ತಿಳಿಸಬೇಕು ಎಂದು ಸಭೆಯಲ್ಲಿ ಚರ್ಚೆಯಾಗಲಿದೆಯಂತೆ.
ಒಟ್ಟಾರೆ ಕಳೆದ 7-8 ತಿಂಗಳಿನಿಂದ ಕೆಲಸವಿಲ್ಲದೆ ಕಾನೂನು ಬಾಹಿರವಾಗಿ ವಜಾದಂತ ಶಿಕ್ಷೆ ಅನುಭವಿಸುತ್ತಿರುವ ನೌಕರರು ಈಗಾಗಲೇ ಕುಪಿತಗೊಂಡಿದ್ದು, ಹೋರಾಟ ಮಾಡೇ ತೀರಬೇಕು ಎಂದು ಹೇಳುತ್ತಿರುವುದಾಗಿ ಮುಖಂಡರೊಬ್ಬರು ತಿಳಿಸಿದ್ದಾರೆ. ಹೀಗಾಗಿ ಒಂದು ವೇಳೆ ಸಾರಿಗೆ ನೌಕರರು ಮುಷ್ಕರ ಆರಂಭಿಸಿದರೆ ಮಾಡು ಇಲ್ಲವೇ ಮಡಿ ಎಂಬ ಹೋರಾಟ ಪಕ್ಕ ಎಂದು ಹೇಳಲಾಗುತ್ತಿದೆ.