ಮೈಸೂರು: ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದ್ದು, ಇದೇ ಸೆಪ್ಟೆಂಬರ್ 28ರಂದು ಜೆಡಿಎಸ್ ಪಕ್ಷದ 102ರಿಂದ 110 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬುಧವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 102 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಮುಂದಿನ 28 ದಿನಗಳಲ್ಲಿ ಮತ್ತೆ 8-10 ಅಭ್ಯರ್ಥಿಗಳು ಈ ಪಟ್ಟಿಗೆ ಸೇರುವ ನಿರೀಕ್ಷೆ ಇದೆ ಎಂದರು.
ಇನ್ನು ಸೆ.28ರಂದು ಬಿಡದಿಯ ತಮ್ಮ ತೋಟದ ಮನೆಯಲ್ಲೇ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಈ ಅಭ್ಯರ್ಥಿಗಳಿಗೆ ಎರಡು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಅಲ್ಲಿ ತಮ್ಮ ಕ್ಷೇತ್ರಗಳಲ್ಲಿ ಯಾವರೀತಿ ನಡೆದುಕೊಳ್ಳಬೇಕು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಬೇಕು ಎಂಬ ಬಗ್ಗೆ ಕಾರ್ಯಾಗಾರ ನಡೆಯಲಿದೆ ಎಂದರು.
ಇನ್ನು ಉಳಿದಿರುವ 19 ತಿಂಗಳುಗಳಲ್ಲಿ ರಾಜ್ಯಾದ್ಯಂತ ಪ್ರವಾಸಮಾಡಲಾಗುವುದು. ಜತೆಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 123 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್ನ ಕೆಲ ನಾಯಕರು ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಮುಂದಿನ ದಿನಗಳಲ್ಲಿ ನಾಡಿನ ಜನರೆ ಉತ್ತರ ಕೊಡಲಿದ್ದಾರೆ ಎಂದು ತಿರುಗೇಟು ನೀಡಿದರು.