ಬಾಗಲಕೋಟೆ: ಸಮಯಕ್ಕೆ ಸರಿಯಾಗಿ ವೇತನ ಕೊಡುತ್ತಿ. ಇನ್ನು ಕೊಡುವ ಅರ್ಧ ವೇತನದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಮನನೊಂದು ವಾಯವ್ಯ ಸಾರಿಗೆ ಸಂಸ್ಥೆ ನೌಕರರೊಬ್ಬರು ಮಂಗಳವಾರ ಸಂಜೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ನಡೆದಿದೆ.
ಬಾದಾಮಿ ಡಿಪೋನಲ್ಲಿ 13 ವರ್ಷಗಳಿಂದ ಚಾಲಕ ಕಂ ನಿರ್ವಾಹಕರಾಗಿರುವ ಭರಮಪ್ಪ ಗೊಂದಿ (44) ಆತ್ಮಹತ್ಯೆಗೆ ಯತ್ನಿಸಿದವರು. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕಳೆದ ರಾತ್ರಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಮೀಪದ ಕೆರೂರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಭರಮಪ್ಪ ವಾಸವಿದ್ದಾರೆ. ಈ ನಡುವೆ ‘ಕೋವಿಡ್ ಸಂಕಷ್ಟದ ನಂತರ ಆರ್ಥಿಕ ಪರಿಸ್ಥಿತಿ ದುರ್ಲಬವಾಗಿದೆ. ಸಮಯಕ್ಕೆ ಸರಿಯಾಗಿ ವೇತನ ಆಗದೇ ಜೀವನ ನಿರ್ವಹಣೆಗೆ ತುಂಬಾ ತೊಂದರೆ ಆಗಿದೆ ಎಂದು ಅಣ್ಣ ಬೇಸರ ಪಟ್ಟುಕೊಂಡಿದ್ದನು.
ಅತ್ತಿಗೆ ರೂಪಾ ಅವರ ಬಳಿಯೂ ಮಂಗಳವಾರ ಬೆಳಗ್ಗೆ ಅಳಲು ತೋಡಿಕೊಂಡಿದ್ದನು. ಈ ಬಾರಿ ದೀಪಾವಳಿ ಹಬ್ಬಕ್ಕೆ ಹಣದ ತೊಂದರೆ ಆಗಿತ್ತು. ಹೀಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಹೋದರ ಪರಸಪ್ಪಗೊಂದಿ ತಿಳಿಸಿದ್ದಾರೆ.
ಇನ್ನು ಸೆಪ್ಟೆಂಬರ್ ತಿಂಗಳ ಅರ್ಧವೇತನವನ್ನು ಉಳಿಸಿಕೊಂಡಿರುವ ಸಾರಿಗೆ ಸಂಸ್ಥೆಗಳು ನ.2ರಂದು (ನಿನ್ನೆ) ಅಕ್ಟೋಬರ್ ಅರ್ಧ ವೇತನವನ್ನು ಬಿಡುಗಡೆ ಮಾಡಿವೆ. ಇನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳ ಅರ್ಧ ಅರ್ಧ ವೇತನ ಯಾವಾಗ ಕೊಡೋದು ಎಂದು ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗ ಬಸ್‌ಗಳಲ್ಲಿ ಪ್ರಯಾಣಿಕರು ಕೊರೊನಾ ಬರುವುದಕ್ಕೂ ಹಿಂದೆ ಇದ್ದಂತೆ ಓಡಾಡುತ್ತಿದ್ದಾರೆ. ಇನ್ನು ಹೆಚ್ಚಾಗಿ ಹೇಳಬೇಕು ಎಂದರೆ ಇಂಧನ ದರ ಹೆಚ್ಚಾಗಿರುವುದರಿಂದ ಹಲವು ಮಂದಿ ಸಾರಿಗೆ ಬಸ್‌ಗಳನ್ನೇರಿ ತಾವು ತಲುಪಬೇಕಾದ ಸ್ಥಳಕ್ಕೆ ಹೋಗುತ್ತಿದ್ದಾರೆ. ಆದರೆ ಇತ್ತ ಸಾರಿಗೆ ಅಧಿಕಾರಿಗಳು ಮಾತ್ರ ಇನ್ನು ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ.