ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸರ್ಕಾರದ ನಿಲುವು, ಯೋಜನೆಗಳು, ಮುನ್ನೋಟದ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟತೆ ಇರಬೇಕು. ಆದರೆ, ರಾಜ್ಯಪಾಲರು ಇಂದು ಮಾಡಿದ ಭಾಷಣದಲ್ಲಿ ಆ ಯಾವುದೂ ಇಲ್ಲ. ಇದೊಂದು ಸುಳ್ಳಿನ ಕಂತೆ. ರಾಜ್ಯಪಾಲರ ಮೂಲಕ ಸರ್ಕಾರ ಸುಳ್ಳು ಹೇಳಿಸಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಒಂದು ಸರ್ಕಾರಕ್ಕೆ ದೂರದೃಷ್ಟಿ ಇರಬೇಕು. ಈ ಸರ್ಕಾರದ ಅವಧಿ ಇನ್ನೂ ಎರಡೂವರೆ ವರ್ಷ ಇದೆ. ಈ ಅವಧಿಯಲ್ಲಿ ನಾವು ಏನು ಮಾಡಲಿದ್ದೇವೆ ಎಂಬುದನ್ನು ಹೇಳಬೇಕಿತ್ತು. ರಾಜ್ಯದ ಹಣಕಾಸು ಪರಿಸ್ಥಿತಿ, ನೀರಾವರಿ ಯೋಜನೆಗಳ ಕುರಿತು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪ ಮಾಡಬೇಕಿತ್ತು ಎಂದು ಹೇಳಿದರು.
ರಾಜ್ಯ ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಹೋಗಿದೆ. ಹಣಕಾಸು ಪರಿಸ್ಥಿತಿ ಹದಗೆಡಲು, ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳಲು, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆ ಮಾಡದಿರಲು ಕೊರೊನಾ ಕಾರಣ ಎಂದು ಸಿಎಂ ಬಿಎಸ್‌ವೈ ನೆಪ ಹೇಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಈ ಅವಧಿಯಲ್ಲಿನ ಯೋಜನೆ, ಕಾರ್ಯಕ್ರಮಗಳು, ಮುನ್ನೋಟ, ದೂರದೃಷ್ಟಿ ಏನು ಎಂಬುದರ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಏನೂ ಹೇಳಿಲ್ಲ. ಇದಕ್ಕೆ ಕಾರಣ, ರಾಜ್ಯ ಸರ್ಕಾರದ ಶೂನ್ಯ ಸಾಧನೆ ಎಂದರು.
ನಮ್ಮ ಸರ್ಕಾರವಿದ್ದಾಗ ಪ್ರತಿ ವರ್ಷವೂ ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ಅಧಿವೇಶನ ನಡೆಸಿದ್ದೇವೆ. ಸುವರ್ಣ ಸೌಧ ಕಟ್ಟಿಸಿದ ಉದ್ದೇಶವಾದರೂ ಏನು? ಸರ್ಕಾರಿ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡುತ್ತೇವೆ, ಉತ್ತರ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದವರು ಈಗ ಅಧಿವೇಶನ ನಡೆಸಲೂ ತಯಾರಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಅಧಿವೇಶನ ನಡೆಸದೆ ಆ ಭಾಗದ ಜನತೆಗೆ ಸರ್ಕಾರ ದ್ರೋಹ ಮಾಡಿದೆ. ಹೀಗಾಗಿ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ವರ್ಷಕ್ಕೆ ಒಮ್ಮೆಯಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಯಲೇಬೇಕು. ಇದು ಆಗ್ರಹಿಸಿದರು.
ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ಬೆಳಗಾವಿ ನಮ್ಮದು ಎಂಬುದು ಈಗಾಗಲೇ ತೀರ್ಮಾನವಾಗಿದೆ. ಅವರ ಉಳಿವಿಗೆ, ರಾಜಕೀಯ ಕಾರಣಕ್ಕೆ ಪದೇಪದೇ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಗಡಿ ವಿಚಾರ ಕೆಣಕುತ್ತಾರೆ. ಅದು ಖಂಡನೀಯ ಎಂದರು.
ವಿಧಾನ ಪರಿಷತ್ ಉಪ ಸಭಾಪತಿ ಚುನಾವಣೆಗೆ ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಆತ್ಮಸಾಕ್ಷಿ ಮತಗಳು ನಮಗೆ ಸಿಗಲಿವೆ ಎಂಬ ವಿಶ್ವಾಸವಿದೆ. ಜೆಡಿಎಸ್‍ನವರು ನಾವು ಜಾತ್ಯತೀತವಾದಿಗಳು ಎಂದು ಹೇಳಿಕೊಂಡು ಎಲ್ಲೆಡೆ ತಮಟೆ ಬಾರಿಸುತ್ತಾರೆ, ಈ ಚುನಾವಣೆಯಲ್ಲಿ ಯಾರ ನಿಜಬಣ್ಣ ಏನೆಂಬುದು ಬಯಲಾಗಲಿದೆ ಎಂದು ತಿಳಿಸಿದ್ದಾರೆ.
ವಿಶ್ವನಾಥ್ ಅವರು ಮಂತ್ರಿಯಾಗಲು ಅನರ್ಹ ಎಂದು ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ನ್ಯಾಯಾಲಯವು ಕಾನೂನು, ಸಂವಿಧಾನದ ವಿಧಿ ವಿಧಾನ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ ಎಂದು ಹೇಳಿದ್ದಾರೆ.