ವಿಜಯಪಥ ಸಮಗ್ರ ಸುದ್ದಿ
ಬಳ್ಳಾರಿ: ವಿಶ್ವಮಾರಿ ಕೊರೊನಾಗೆ ದೇಶದಾದ್ಯಂತ ಶನಿವಾರ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಅಂದು ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಕಾರ್ಯಕರ್ತರೊಬ್ಬರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬಳ್ಳಾರಿಯಲ್ಲಿ ಆರೋಗ್ಯ ಇಲಾಖೆಯ ಕಾಯಂ ಉದ್ಯೋಗಿಯಾಗಿದ್ದ 43 ವರ್ಷದ ನಾಗರಾಜು ಮೃತರು. ನಾಗರಾಜು ಅವರ ನಿಧನದ ಬಗ್ಗೆ ಆರೋಗ್ಯ ಇಲಾಖೆ ವಿವರಣೆ ನೀಡಿದ್ದು, ಕೋವಿಡ್ ಲಸಿಕೆಗೂ ಅವರ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಇನ್ನು ಸೋಮವಾರ ಬೆಳಗ್ಗೆ 11.15ರ ವೇಳೆಗೆ ಅವರನ್ನು ಜಿಂದಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
24 ಗಂಟೆಯವರೆಗೂ ಯಾವುದೇ ಸಮಸ್ಯೆ ಆಗಿಲ್ಲ
ನಾಗರಾಜು ಅವರು ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಲಸಿಕೆ ಪಡೆದುಕೊಂಡಿದ್ದರು. ಸೋಮವಾರ ಬೆಳಗಿನವರೆಗೂ ಸಹಜವಾಗಿದ್ದರು. ಲಸಿಕೆ ಪಡೆದುಕೊಂಡ 24 ಗಂಟೆಯವರೆಗೂ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ.
ಆದರೆ ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಬಂದಿದ್ದ ಅವರು 9.30ರ ಸುಮಾರಿಗೆ ಎದೆ ನೋವಿನಿಂದ ಕುಸಿದುಬಿದ್ದಿದ್ದಾರೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಜಿಂದಾಲ್ ಸಂಜೀವಿನ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಅದೇ ಬಾಟಲಿಯಿಂದ ಲಸಿಕೆ ಪಡೆದುಕೊಂಡಿರುವ ಇತರೆ ಆರೋಗ್ಯ ಕಾರ್ಯಕರ್ತರಲ್ಲಿ ಅಡ್ಡಪರಿಣಾಮದ ಸಮಸ್ಯೆ ಕಂಡುಬಂದಿಲ್ಲ. ನಾಗರಾಜು ಅವರು ಹೃದಯಾಘಾತದ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಮಟ್ಟದ ಎಇಎಫ್‌ಐ ಸಮಿತಿಯ ಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಂತಿಮ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಹೇಳಿದೆ.