ಬೆಂಗಳೂರು: ಆಕ್ಟೋಬರ್ ತಿಂಗಳ ವೇತನ ಇನ್ನು ಬರಲಿಲ್ಲ ಎಂದು ಕಣ್ಣು ಬಾಯಿ ಬಿಡುತ್ತಿರುವ ಸಾರಿಗೆ ಸಿಬ್ಬಂದಿಗೆ ಡಿಸಿಎಂ ಲಕ್ಷಣ ಸವದಿ ಸರ್ಕಾರದಿಂದ ಮತ್ತೆ ಮೂರು ತಿಂಗಳ ವೇತನ ಕೊಡಿಸುವಲ್ಲಿ ಸಫಲರಾಗಿದ್ದಾರೆ.
ಹೌದು! ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ 3 ತಿಂಗಳ ವೇತನದ ಮೊತ್ತ 634 ಕೋಟಿ 50 ಲಕ್ಷ ರೂಪಾಯಿ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡರು.
ಅದಕ್ಕೆ ತಕ್ಷಣ ಸ್ಪಂದಿಸಿದ ಸಿಎಂ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ಈ 3 ತಿಂಗಳ ಸಂಬಳದ ಒಟ್ಟು ಮೊತ್ತವಾದ 634 ಕೋಟಿ 50 ಲಕ್ಷ ರೂ. ಗಳನ್ನು ಸಾರಿಗೆ ಸಂಸ್ಥೆಗಳ ಸಿಬ್ಬಂದಿ ಬಿಡುಗಡೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದರಿಂದಾಗಿ ಸಾರಿಗೆ ಸಿಬ್ಬಂದಿಯ ಒಟ್ಟು ಮೂರು ತಿಂಗಳುಗಳ ಶೇಕಡ 75 ರಷ್ಟು ವೇತನದ ಮೊತ್ತ 634.50 ರೂಪಾಯಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಕ್ರಮ ಕೈಗೊಂಡಂತಾಗಿದೆ. ಉಳಿದ ಶೇಕಡ 25 ರಷ್ಟು ವೇತನಗಳನ್ನು ಸಾರಿಗೆ ಸಂಸ್ಥೆಗಳೇ ತಮ್ಮ ಸಂಪನ್ಮೂಲಗಳಿಂದ ಭರಿಸಲಿವೆ.
ಇನ್ನು ಕೆಎಸ್ಆರ್ಟಿಸಿ, ಬಿಎಂಟಿಸಿ, ಈಶಾನ್ಯ ಮತ್ತು ವಾಯವ್ಯ ಸಾರಿಗೆ ಸಂಸ್ಥೆಗಳ ಸುಮಾರು 1.30 ಲಕ್ಷ ಸಿಬ್ಬಂದಿಗೆ ವೇತನ ಪಾವತಿಗೆ ಇದರಿಂದ ಸಾಧ್ಯವಾದಂತಾಗಿದೆ.