ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ತಾಲೂಕಿನ ಕಿರಗಸೂರು ಗ್ರಾಮ ಪಂಚಾಯಿತಿಯ ಆಡಳಿತ ಕಾಂಗ್ರೆಸ್ ಕೈ ವಶವಾಗಿದ್ದು, ನೂತನ ಅಧ್ಯಕ್ಷೆಯಾಗಿ ಜ್ಯೋತಿ ಕಾಂತರಾಜು, ಉಪಾಧ್ಯಕ್ಷರಾಗಿ ಹುಣಸೂರು ನಾಗರಾಜು ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಗೊಂಡರು.
ವರುಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಕಿರಗಸೂರು ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಅಧಿಕಾರದ ಗದ್ದುಗೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರ ನಡುವೆ ಪ್ರತಿಷ್ಠೆಯಾಗಿತ್ತು. ಅಧಿಕಾರ ಕೈಗೊ ಅಥವಾ ಕಮಲಕ್ಕೊ ಎಂಬ ವಬಗ್ಗೆ ಕುತೂಹಲವಿತ್ತು. ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು.
ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಕಾಂತರಾಜು ಹಾಗೂ ಚಿನ್ನತಾಯಮ್ಮ, ಸಾಮಾನ್ಯಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಹುಣಸೂರು ನಾಗರಾಜು ಮತ್ತು ಪಿ.ನಾಗರಾಜು ನಾಮಪತ್ರ ಸಲ್ಲಿಸಿದರು. ನಂತರ ನಡೆದ ಚುನಾವಣೆಯಲ್ಲಿ ತಲಾ 9 ಮತ ಪಡೆದ ಜ್ಯೋತಿ ಕಾಂತರಾಜು ಅಧ್ಯಕ್ಷೆಯಾಗಿ, ಹುಣಸೂರು ನಾಗರಾಜು ಉಪಾಧ್ಯಕ್ಷರಾಗಿ ಆಯ್ಕೆಯಾದರೆ,ಏಂಟೆಂಟು ಮತಗಳನ್ನು ಪಡೆದುಕೊಂಡ ಚಿನ್ನತಾಯಮ್ಮ ಹಾಗೂ ಪಿ.ನಾಗರಾಜು ಪರಾಭವಗೊಂಡರು.
ಪಂಚಾಯಿತಿಯಲ್ಲಿನ ಎಲ್ಲಾ 17 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಫಲಿತಾಂಶ ಪ್ರಕಟಣೆಗೊಳ್ಳುತ್ತಿದ್ದಂತೆ ಅಧ್ಯಕ್ಷ-ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಚುನಾವಣಾಧಿಕಾರಿ ನೀರಾವರಿ ನಿಗಮದ ಎಇಇ ಸುಹಾಸ್ ಕಾರ್ಯನಿರ್ವಹಿಸಿದರು.
ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ರಮೇಶ್ ಮಾತನಾಡಿ, ಹಲವು ಸದಸ್ಯರ ಸಹಕಾರದಿಂದ ಕಿರಗಸೂರು ಗ್ರಾಮ ಪಂಚಾಯಿತಿ ಕಾಂಗ್ರೆಸ್ ವಶವಾಗಿದೆ. ಚುನಾವಣೆ ನಂತರ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ಅಭಿವೃದ್ಧಿಗೆ ಹಾಗೂ ಹಳ್ಳಿಗಾಡಿನ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ದುಡಿಯಬೇಕು ಎಂದು ಸಲಹೆ ನೀಡಿದರು.
ಎಪಿಎಂಸಿ ಅಧ್ಯಕ್ಷ ಎನ್.ಅನಿಲ್ ಕುಮಾರ್, ಕುರುಬರ ಸಂಘದ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಶಾಂತ್ ಬಾಬು, ಗ್ರಾ.ಪಂ ಸದಸ್ಯರಾದ ಕಾಮಿನಿ ರಾಜಶೇಖರ್, ಸರೋಜಮ್ಮ, ಗಿರಿಜಮ್ಮ, ಎಂ.ಮಹೇಶ, ರಾಜೇಶ್ವರಿ ಮಂಜು, ಭಾಗ್ಯ, ಮಾಜಿ ಅಧ್ಯಕ್ಷರಾದ ಮನ್ನೇಹುಂಡಿ ಮಹೇಶ, ಕರಿಯಪ್ಪ, ಪಿಡಿಒ ಸೌಮ್ಯಲತ, ಪುರಸಭೆ ಸದಸ್ಯರಾದ ಸಿ.ಪ್ರಕಾಶ್, ಬಾದಾಮಿ ಮಂಜು, ಮುಖಂಡರಾದ ಏಳುಮಲೆ ಮಂಜು, ಸೋಮಣ್ಣ ನಾಯಕ, ಚಿನ್ನಬುದ್ಧಿ, ಎಂ.ವೆಂಕಟೇಶ್(ವೆಂಕಿ), ಎಚ್.ಸಿ.ಅರುಣ್ ಕುಮಾರ ಇತರರು ಇದ್ದರು.