ಮುಂಬೈ: ಭಾರತೀಯ ಚಿತ್ರರಂಗದ ಮತ್ತೊಬ್ಬ ಹಿರಿಯ ನಟ- ಕಾಮಿಡಿಯನ್ ಜಗದೀಪ್ (81) ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬುಧವಾರ ರಾತ್ರಿ ನಿಧನರಾಗಿದ್ದು ಅವರ ಅಂತ್ಯಕ್ರಿಯೆಯನ್ನು ಗುರುವಾರ ದಕ್ಷಿಣ ಮುಂಬೈನ ಸ್ಮಶಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಜಗದೀಪ್ ಬುಧವಾರ ರಾತ್ರಿ 8.30ರಲ್ಲಿ ಅವರ ಬಾಂದ್ರಾ ನಿವಾಸದಲ್ಲಿ ಅಸುನೀಗಿದರು. ಅವರ ಮಗ, ನಟ ಜಾವೇದ್ ಜಾಫೆರಿ ಅಂತಿಮ ವಿಧಿವಿಧಾನವನ್ನು ನರೆವೇರಿಸಲಿದ್ದಾರೆ.
ಅಮಿತಾಭ್ ಬಚ್ಚನ್ ಅವರ ‘ಶೋಲೆ’ ಸಿನಿಮಾದಲ್ಲಿನ ಸೂರ್ಮಾ ಭೋಪಾಲಿ ಎಂಬ ಪಾತ್ರದ ಮೂಲಕ ನಟ ಜಗದೀಪ್ ಹೆಚ್ಚು ಜನಪ್ರಿಯ ಆಗಿದ್ದರು.
ಜಗದೀಪ್ ಅವರ ಮೂಲ ಹೆಸರು ಸಯ್ಯದ್ ಇಷ್ತಿಯಾಕ್ ಅಹ್ಮದ್ ಜಫ್ರಿ. ಆದರೆ ಚಿತ್ರರಂಗದಲ್ಲಿ ಜಗದೀಪ್ ಎಂಬ ಹೆಸರಿನಿಂದಲೇ ಗುರುತಿಸಿಕೊಂಡಿದ್ದರು.ಜಗದೀಪ್ ಪುತ್ರ ಜಾವೇದ್ ಜಫ್ರಿ ಕೂಡ ಜನಪ್ರಿಯ ನಟ.
ಬಾಂದ್ರಾದಲ್ಲಿನ ನಿವಾಸದಲ್ಲಿ ಬುಧವಾರ ರಾತ್ರಿ 8-30ರ ಸಮಯದಲ್ಲಿ ಅವರು ನಿಧನರಾಗಿದ್ದು, ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಅವರ ಆಪ್ತ ಸ್ನೇಹಿತ ನಿರ್ಮಾಪಕ ಮೊಹಮ್ಮದ್ ಆಲಿ ತಿಳಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಜಗದೀಪ್ ಸುಮಾರು 400 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1975ರಲ್ಲಿ ಬಿಡುಗಡೆಯಾದ ‘ಶೋಲೆ’ ಚಿತ್ರದಲ್ಲಿನ ಸೂರ್ಮಾ ಭೋಪಾಲಿ ಪಾತ್ರ ಇಂದಿಗೂ ಕೂಡಾ ಜನ ಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ‘ಪುರಾಣ ಮಂದಿರ್’ ಮತ್ತು ಅಂದಾಜ್ ಅಪ್ನಾ ಅಪ್ನಾ ಚಿತ್ರದಲ್ಲಿ ಸಲ್ಮಾನ್ ಖಾನ್ ತಂದೆಯ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದರು.
‘ಶೋಲೆ’ ಸಿನಿಮಾದಲ್ಲಿ ತಾವು ಮಾಡಿದ್ದ ಪಾತ್ರವನ್ನೇ ಆಧಾರವಾಗಿಟ್ಟುಕೊಂಡು 1998ರಲ್ಲಿ ‘ಸೂರ್ಮಾ ಭೋಪಾಲಿ’ ಶೀರ್ಷಿಕೆಯಲ್ಲೇ ಜಗದೀಪ್ ಸಿನಿಮಾ ಮಾಡಿದ್ದರು. ಜಗದೀಪ್ ಇಬ್ಬರು ಮಕ್ಕಳನ್ನು ಅಗಲಿದ್ದು, ಅವರ ನಿಧನಕ್ಕೆ ಬಾಲಿವುಡ್ ನ ಅನೇಕರು ಕಂಬನಿ ಮಿಡಿದಿದ್ದಾರೆ.