ಬಳ್ಳಾರಿ: ರಂಗಭೂಮಿ ಹಿರಿಯ ಕಲಾವಿದೆ, ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ (77)ಬುಧವಾರ ನಿಧರಾದರು.
ನಗರದ ರೇಡಿಯೋ ಪಾರ್ಕ್ ಪ್ರದೇಶದ ಮನೆಯಲ್ಲಿ ರಾತ್ರಿ 11.30ರ ಸುಮಾರಿಗೆ ತೀವ್ರ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ವಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದರು.
ಸುಭದ್ರಮ್ಮ ಅವರು ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ. ಪತಿ ಲಿಂಗರಾಜ ಮನ್ಸೂರ್ ಕೆಲ ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು.
ಸುಭದ್ರಮ್ಮ ಅವರು 50 ವರ್ಷಗಳ ಕಾಲ ರಂಗಭೂಮಿಯಲ್ಲಿ ಮಿಂಚಿದ ಪ್ರತಿಭೆಯಾಗಿದ್ದು, 27ನೇ ವಯಸ್ಸಿಗೆ ರಂಗಭೂಮಿ ಪ್ರವೇಶಿಸಿದ್ದರು. ಕುಂತಿ, ಗಾಂಧಾರಿ, ದ್ರೌಪತಿ, ಉತ್ತರೆ, ಸೀತೆ ಪಾತ್ರಗಳ ಮೂಲಕ ಜನಮನದಲ್ಲಿ ಅಚ್ಚೊತ್ತಿದ್ದರು. ಬಳ್ಳಾರಿ ಸುಭದ್ರಮ್ಮ ಎಂದೇ ಖ್ಯಾತಿ ಗಳಿಸಿದ್ದ ಅವರು 2,000ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಿಗೆ ಬಣ್ಣ ಹಚ್ಚಿದ್ದಾರೆ. ಇವರ ರಂಗಭೂಮಿ ಸೇವೆಯನ್ನು ಗುರುತಿಸಿದ್ದ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿಯ ಗೌರವ ಡಾಕ್ಟರೇಟ್, ಗುಬ್ಬಿ ವೀರಣ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಸುಭದ್ರಮ್ಮ ಪಡೆದಿದ್ದಾರೆ.
ಮೃತರ ಅಂತ್ಯ ಕ್ರಿಯೆ ಇಂದು ನಗರದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.