NEWSನಮ್ಮರಾಜ್ಯರಾಜಕೀಯ

ಕೋವಿಡ್‌ ಕಿಟ್‌ ಹಗರಣ: ಆಡಳಿತ-ವಿಪಕ್ಷಗಳಿಗೆ ಪಂಚ ಪ್ರಶ್ನೆ ಕೇಳಿದ ಎಚ್‌ಡಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವಿಶ್ವಮಾರಿ ತನ್ನ ಅಟ್ಟಹಾಸವನ್ನು ನಾಗಲೋಟದಲ್ಲಿ ಮುಂದುವರಿಸಿದೆ. ಈ ಸೋಂಕಿನ ಸನ್ನಿವೇಶದಲ್ಲಿ ಕೋವಿಡ್‌ಗೆ ಸಂಬಂಧಿಸಿ ಕಿಟ್‌ ಕೊಳ್ಳುವಿಕೆಯಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ಎಸಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೂ ಆಡಳಿತ ಪಕ್ಷ ಈ ಬಗ್ಗೆ ಯಾವುದೇ ತನಿಖೆಗೆ ಮುಂದಾಗಿಲ್ಲ. ಅದರಂತೆ ಕಾಂಗ್ರೆಸ್‌ ಪಕ್ಷದವರು  ಈ ಹಗರಣದ ಬಗ್ಗೆ ಈ ವರೆಗೆ ಯಾವುದೇ ತನಿಖಾ ಸಂಸ್ಥೆಗೆ ದೂರು ನೀಡಿಲ್ಲ. ಇದು ಪ್ರಚಾರಕ್ಕಷ್ಟೇ ಸೀಮಿತವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಜತೆಗೆ ಈ ಬಗ್ಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮತ್ತು ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದು ಸಮರ್ಪಕ ಉತ್ತರವನ್ನು ಈ ಎರಡು ಕಡೆಯವರಿಂದ ಬಯಸಿದ್ದಾರೆ.

ಜನರನ್ನು ರಕ್ಷಿಸಬೇಕಾದವರೇ ಕೆಸರೆರಚಾಟದ ಮೂಲಕ ಜನರ ಜೀವದ ಜತೆಗೆ ಚೆಲ್ಲಾಟ ಆಡುತ್ತಿರುವುದು ಎರಡೂ ಪಕ್ಷಗಳ ಅತ್ಯಂತ ಕ್ರೂರ ನಡವಳಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೊಡ್ಡ ಮಟ್ಟದ ಆರೋಪ ಹೊತ್ತಿರುವ ಆಡಳಿತ ಪಕ್ಷ ತನಿಖೆಯಿಂದ ಮುಕ್ತಿ ಪಡೆಯುವ ಯಾವ ಕ್ರಮಕ್ಕೂ ಮುಂದಾಗದೇ, ಹಗರಣ ನಡೆದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ ಎಂದು ದೂರಿರುವ ಅವರು,  ಕಾಂಗ್ರೆಸ್​ ಮತ್ತು ಬಿಜೆಪಿಗೆ ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ​ ಎಚ್​ಡಿಕೆ ಪ್ರಶ್ನೆಗಳು

  1. ಕೋವಿಡ್‌ ಹಗರಣದ ಬಗ್ಗೆ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ನಾಯಕರು ಎಲ್ಲಾ ದಾಖಲೆಪತ್ರಗಳಿದ್ದೂ ಈವರೆಗೆ ಯಾರ ವಿರುದ್ಧವೂ ಯಾಕೆ ಒಂದೇ ಒಂದು ದೂರು ದಾಖಲಿಸಿಲ್ಲ?
  2. ದೂರು ದಾಖಲು ಮಾಡದೇ ನಿತ್ಯ ಸುದ್ದಿಗೋಷ್ಠಿ ನಡೆಸಿ ಏರು ಧ್ವನಿಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್‌ ನಾಯಕರ ನಡೆಯ ಹಿಂದೆ ಪ್ರಚಾರಪ್ರಿಯತೆ ಅಡಗಿದೆಯೋ ಅಥವಾ ಸಾರ್ವಜನಿಕ ಹಣ ಅಪವ್ಯವಾಗುತ್ತಿದೆ ಎಂಬ ಪ್ರಮಾಣಿಕ ಕಾಳಜಿ ಇದೆಯೋ?
  3. ‘ಲೆಕ್ಕ ಕೊಡಿ’ ಎಂದು ಕಾಂಗ್ರೆಸ್‌ನ ಸಿಎಲ್‌ಪಿ ನಾಯಕರು ಕೇಳುತ್ತಾರೆ. ‘ಉತ್ತರ ಕೊಡಿ ಬಿಜೆಪಿ’ ಎಂದು ಪಕ್ಷದ ಅಧ್ಯಕ್ಷರು ಕೇಳುತ್ತಾರೆ. ನಿಮಗೆ ಉತ್ತರ, ಲೆಕ್ಕ ಕೊಟ್ಟರೆ ಸಾಕೆ? ಹಗರಣವನ್ನು ಕಾನೂನಾತ್ಮಕ ಹೋರಾಟದ ದಿಕ್ಕಿಗೆ ಕೊಂಡೊಯ್ಯುವ ಯಾವುದಾದರೂ ನಿಶ್ಚಿತ, ನಿಖರ ಯೋಜನೆ ಇದೆಯೇ?
  4. ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಲೋಕಾಯುಕ್ತ ಸಂಸ್ಥೆಯ ರಕ್ತ, ಮಾಂಸವನ್ನು ಹೀರಿ, ತಿಂದು ಇದೇ ಕಾಂಗ್ರೆಸ್‌ ಸರ್ಕಾರ ಎಸಿಬಿ ರಚಿಸಿತ್ತು. ಹಗರಣದ ಸಂಬಂಧ ಇದೇ ಸಂಸ್ಥೆಗೆ ಕಾಂಗ್ರೆಸ್‌ ದೂರು ನೀಡಬಹುದಿತ್ತಲ್ಲ? ಯಾಕೆ ಎಸಿಬಿ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇಲ್ಲವೇ?
  5. ಕೋವಿಡ್‌ ಅಕ್ರಮದ ಆರೋಪ ಮಾಡಿದಾಗಿನಿಂದ ಕಾಂಗ್ರೆಸ್‌ ನಾಯಕರು ಸುದ್ದಿಗೋಷ್ಠಿ, ಪತ್ರಿಕಾ ಹೇಳಿಕೆ, ಟ್ವೀಟ್‌, ಟ್ವಿಟರ್‌ ಟ್ರೆಂಡ್‌, ಪತ್ರ ಚಳವಳಿಗೆ ಮಾತ್ರ ಸೀಮಿವಾಗಿರುವುದನ್ನು ನೋಡುತ್ತಿದ್ದರೆ ಇದು ಕೇವಲ ಪ್ರಚಾರಕ್ಕಾಗಿ, ಸುದ್ದಿಯಲ್ಲಿರಲ್ಲಿಕ್ಕಾಗಿ ಮಾಡುತ್ತಿರುವ ಪ್ರಹಸನ ಎನಿಸುತ್ತಿದೆ. ಇದಕ್ಕೆ ನಿಮ್ಮ ಉತ್ತರವೇನು?

ಜವಾಬ್ದಾರಿಯುತ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ಗೆ ಸಾರ್ವಜನಿಕರ ಹಣದ ಮೇಲೆ ಅಷ್ಟು ಕಾಳಜಿ ಇದ್ದರೆ ಮೊದಲು ಯಾವುದಾದರೂ ತನಿಖಾ ಸಂಸ್ಥೆಗೆ ಅಧಿಕೃತವಾಗಿ ದೂರು ದಾಖಲಿಸಲಿ ನಂತರ ಮಾತನಾಡಿ ಅದನ್ನು ಬಿಟ್ಟು ಕೋಲು ಮುರುಯಬಾರದು ಹಾವು ಸಾಯಬಾರದು ಎಂಬಂತೆ ವರ್ತಿಸುವುದು ನಿಮಗೆ ಶೋಭೆ ತರುವಂತದ್ದಲ್ಲ ಎಂದು ಎಚ್​​ಡಿಕೆ ಕಾಂಗ್ರೆಸ್​​ಗೆ  ತೀಕ್ಷ್ಣವಾಗಿ ತಿವಿದಿದ್ದಾರೆ.

ಬಿಜೆಪಿಗೂ ಹಲವು ಪ್ರಶ್ನೆಗಳು

  1. ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಅವ್ಯವರಾದ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡಿದರೂ ಬಿಜೆಪಿ ಯಾಕೆ ತನಿಖೆಯ ಆಗ್ರಹಕ್ಕೆ ಕಿವಿಗೊಡುತ್ತಿಲ್ಲ. ತನಿಖೆಯ ಕಡೆಗೆ ಗಮನವನ್ನೇ ನೀಡಿದೇ ನಿಂದನೆಯನ್ನು ಯಾಕೆ ಹೊತ್ತು ತಿರುಗುತ್ತಿದೆ?
  2. ನಿರ್ದಿಷ್ಟ ಸಚಿವರ ಮೇಲೆ ಗಂಭೀರ ಆರೋಪಗಳು ಬಂದರೂ ಅವರಿಂದ ರಾಜೀನಾಮೆ ಪಡೆದಿಲ್ಲ ಏಕೆ? ಇದೇನಾ ಜನರಿಗೆ ಯಡಿಯೂರಪ್ಪನವರ ಉತ್ತರದಾಯಿತ್ವ?
  3. ಸಚಿವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿಗಳಿಗೆ ರಾಜಕೀಯದ ಒತ್ತಡ ಇರಬಹುದು. ಆದರೆ, ಅಧಿಕಾರಿಗಳ ವಿರುದ್ಧವಾದರೂ ಕ್ರಮ ಕೈಗೊಳ್ಳಬಹುದಿತ್ತು. ಈವರೆಗೆ ಒಬ್ಬೇ ಒಬ್ಬ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡ ವರದಿ ಇಲ್ಲ. ಅಧಿಕಾರಿಗಳನ್ನು ಅಲ್ಲಲ್ಲಿಯೇ ಬಿಟ್ಟು ಸಾಕ್ಷ್ಯ ನಾಶಕ್ಕೇನಾದರೂ ಪ್ರಯತ್ನಿಸುತ್ತಿದ್ದೀರಾ?
  4. ಕಾಂಗ್ರೆಸ್‌ ಮಾಡುತ್ತಿರುವ ಸುದ್ದಿಗೋಷ್ಠಿಗಳಿಗೆ ಪ್ರತಿಯಾಗಿ ಸಚಿವರಿಂದ ಸುದ್ದಿಗೋಷ್ಠಿ ಮಾಡಿಸುತ್ತಿರುವ ಸರ್ಕಾರ ಇಲ್ಲಿ ಪ್ರಚಾರ ಪಡೆಯಲೇನಾದರೂ ಪ್ರಯತ್ನಿಸುತ್ತಿದೆಯೇ? ಅದೂ ಐವರು ಸಚಿವರು ಒಟ್ಟೊಟ್ಟಿಗೆ ಬಂದು ಮಾಧ್ಯಮಗಳ ಮುಂದೆ ನಿಲ್ಲುವುದನ್ನು ನೋಡಿದರೆ ಮಂತ್ರಿಮಂಡಲದ ಸಹೋದ್ಯೋಗಿಗಳಲ್ಲಿ ಪ್ರಚಾರದ ದಾಹ ತೀವ್ರವಾಗಿರುವಂತೆ ಕಾಣುತ್ತಿದೆ… ನೀವು ಇದಕ್ಕೆ…?
  5. ಹಗರಣದ ಬಗ್ಗೆ ಈ ವರೆಗೆ ಪ್ರತಿ ಹೇಳಿಕೆಗಳನ್ನೇ ನೀಡುತ್ತಿರುವ ಸರ್ಕಾರ ತನಿಖೆಗೆ ಹಿಂದೇಟು ಹಾಕುತ್ತಿರುವುದು ನೋಡಿದರೆ, ಹಣ ಕದಿಯಲಾಗಿದೆ ಎಂದು ಅನಿಸದೇ? ಆಪರೇಷನ್‌ ಕಮಲಕ್ಕೆ ಮಾಡಿದ್ದ ಸಾಲ ತೀರಿಸಲು ಈ ಹಗರಣ ಮಾಡಿದ್ದೀರಾ? ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದು ಇದಕ್ಕೆ ನೀವು ಸೂಕ್ತ ಉತ್ತರವನ್ನು ತನಿಖೆಗೆ ವಹಿಸಿ ಇದು ಸುಳ್ಳು ಎಂದು ಸಾಬೀತು ಪಡಿಸಿದರೆ ಒಪ್ಪಿಕೊಳ್ಳಬಹುದು. ಅದನ್ನು ಬಿಟ್ಟು ಈ ರೀತಿಯ ಪ್ರಚಾರಕ್ಕೆ ಮುಂದಾಗಬಾರದು ಎಂದು ಕಿಡಿ ನುಡಿಯಲ್ಲಿ ಉತ್ತರ ಬಯಸಿದ್ದಾರೆ.

1 Comment

Leave a Reply

error: Content is protected !!
LATEST
NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು