ಬೆಂಗಳೂರು: ಲಾಕ್ಡೌನ್ ಕಟ್ಟುನಿಟ್ಟಿನ ಜಾರಿಗೆ ಸಿವಿಲ್ ಡಿಫೆನ್ಸ್ ನೆರವು ಸಹ ಪಡೆಯುತ್ತೇವೆ. ಬೆಂಗಳೂರಿನ ಎಲ್ಲಾ ವಾರ್ಡ್ಗಳಿಗೆ 200 ಆಂಬುಲೆನ್ಸ್ ಅಗತ್ಯವಿದೆ. ಸದ್ಯ 100 ಆಂಬುಲೆನ್ಸ್ ಸಿದ್ಧವಿವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ನಗರದಲ್ಲಿ ನಿತ್ಯೊಪಯೋಗಿ ವಸ್ತುಗಳ ಖರೀದಿ ಸೇರಿಂತೆ ಇತರ ಕೆಲಸಗಳನ್ನು ಮಾಡಿಕೊಳ್ಳು ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಬಳಿಕ ಅವಕಾಶವಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ತಿಳಿಸಿದರು.
ನಾಗರಿಕರು ನಿಗದಿತ ಅವಧಿ ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಿ. ನಂತರ ಮನೆ ಸೇರಿಕೊಳ್ಳಬೇಕು. ಈ ನಡುವೆ ಪೊಲೀಸ್ ಫೋರ್ಸ್ ಬಳಸುವ ಅನಿವಾರ್ಯತೆ ತಂದುಕೊಡಬೇಡಿ. ಪೊಲೀಸ್ ಇಲಾಖೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಪಾಲನೆ ಮಾಡಲು ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಈಗಾಗಲೇ ಲಾಕ್ ಡೌನ್ ವಾತಾವರಣ ನಿರ್ಮಾಣವಾಗಿದ್ದು, ಹಲವೆಡೆ ಬ್ಯಾರಿಕೇಡ್ ಹಾಕಿ, ಫ್ಲೈ ಓವರ್ ಬಂದ್ ಮಾಡಿದ್ದೇವೆ. ವಾಹನ ದಟ್ಟಣೆ ಕಡಿಮೆ ಆಗಿದೆ. ಜನರು ಸಹಕಾರ ನೀಡಬೇಕು. ಪೊಲೀಸರು ಸಹಕಾರ ನೀಡಲಿದ್ದಾರೆ. ಲಾಕ್ ಡೌನ್ ಯಶಸ್ವಿ ಆಗಬೇಕಾದರೆ ಜನರ ಸ್ವಯಂ ಪ್ರೇರಿತ ಲಾಕ್ ಡೌನ್ ಆಗಬೇಕು. ಹೀಗಾದರೆ ಮಾತ್ರ ಹೆಚ್ಚುತ್ತಿರುವ ಸೋಂಕ್ಗೆ ಬ್ರೇಕ್ ಮಾಡಲು ಸಾಧ್ಯವಾಗುತ್ತದೆ ಎಂದರು.
ಬೆಂಗಳೂರು ಸೇರಿ ನಾಲ್ಕು ಜಿಲ್ಲೆಗಳಲ್ಲಿ ಲಾಕ್ಡೌನ್ ಕುರಿತು ಗೃಹ ಇಲಾಖೆಯ ಮುಖ್ಯಸ್ಥರ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಬೆಂಗಳೂರು ನಗರಕ್ಕೆ 2000 ಹೋಂ ಗಾರ್ಡ್ಗಳ ಅಗತ್ಯವಿದ್ದು, ಸದ್ಯದಲ್ಲೇ ನೇಮಕ ಮಾಡುತ್ತೇವೆ. ಇನ್ನು ಮಾರ್ಗಸೂಚಿ ಬದಲಾಗಿರುವ ಹಿನ್ನೆಲೆಯಲ್ಲಿ ನಮ್ಮ ಪೊಲೀಸರ ಕಾರ್ಯ ವೈಖರಿಯೂ ಬದಲಾಗುತ್ತದೆ ಎಂದು ತಿಳಿಸಿದರು.
ಕೃಷಿ, ಕೈಗಾರಿಕಾ ಉತ್ಪನ್ನಗಳಿಗೆ ಸರಬರಾಜು ಮಾಡಲು ಸಮಸ್ಯೆ ಆಗಲ್ಲ. ಇಂದು ಮೊದಲ ದಿನ ಆದ್ದರಿಂದ ಸ್ವಲ್ಪ ಫ್ರೀ ಬಿಡಲಾಗಿದೆ, ನಾಳೆಯಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.